ಕೊಪ್ಪಳ: ತಾಲೂಕಿನ ಬಸಾಪುರ ಗ್ರಾಮದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಕೆಡವಿದ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಡಿಎಸ್‌ಪಿ ಹಾಗೂ ಕೊಪ್ಪಳ ತಹಸೀಲ್ದಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ಎಸಗಿದ ವ್ಯಕ್ತಿಯನ್ನು ಮಹೇಶ ಕಲ್ಯಾಣಪ್ಪ ಓಜಿನಹಳ್ಳಿ ಎಂದು ಗುರುತಿಸಲಾಗಿದೆ..
ಎಂದಿನಂತೆಯೇ ಮದ್ಯ ಸೇವಿಸಿ ಗ್ರಾಮದಲ್ಲಿನ ಗಾಂಧಿ ವೃತ್ತದ ಬಳಿ ಆಗಮಿಸಿದ ಆರೋಪಿ ವೃತ್ತದ ಮೇಲ್ಭಾಗಕ್ಕೆ ತೆರಳಿ ಗಾಂಧಿ ಪ್ರತಿಮೆಯನ್ನು ಹಿಡಿದು ಎಳೆದಾಡಿದ್ದಾನೆ. ಪ್ರತಿಮೆಯಲ್ಲಿ ಗಾಂಧೀಜಿಯ ಕೈಯಲ್ಲಿನ ಬೆತ್ತ (ಊರುಗೋಲು) ಹಗುರವಾಗಿದ್ದರಿಂದ ಅದನ್ನು ಹಿಡಿದು ಎಳೆದಾಡಿದ್ದು, ಎಳೆದ ರಭಸಕ್ಕೆ ಬೆತ್ತ ಕಿತ್ತು ಬಂದಿದೆ. ಬೆತ್ತ ಕಿತ್ತು ಬೀಳುತ್ತಿದ್ದಂತೆ ಮೂರ್ತಿಯು ಭಾರ ತಾಳದೆ ಕೆಳಗೆ ಮುರಿದು ಬಿದ್ದಿದೆ. ಕೂಡಲೇ ಸ್ಥಳೀಯರು ಈತನ ಕೃತ್ಯ ನೋಡಿ ಆತನನ್ನ ಹಿಡಿದು ಥಳಿಸಿ ಪೊಲೀಸ್ ಠಾಣೆ, ತಾಲೂಕು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಗಾಂಧೀಜಿ ಪ್ರತಿಮೆ ಕೆಡವಿದ ಘಟನೆಯ ಬಗ್ಗೆ ಮಾಹಿತಿ ಪಡೆದ ಕೊಪ್ಪಳ ಡಿಎಸ್‌ಪಿ ಗೀತಾ, ತಹಸೀಲ್ದಾರ ಅಮರೇಶ ಬಿರಾದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹೇಶ ಓಜಿನಳ್ಳಿಯ ಕೃತ್ಯಕ್ಕೆ ಇಡೀ ಗ್ರಾಮವೇ ಆತನ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಆತನ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ಅಲ್ಲದೇ, ಗ್ರಾಮದಲ್ಲಿನ ಕೆಲವು ಮುಖಂಡರು ಮೂರ್ತಿಯ ಧ್ವಂಸದ ಹಿಂದೆ ಯಾರದ್ದಾದರೂ ಕೃತ್ಯ ಇದೆಯೋ ? ಅಥವಾ ಆತನೇ ಇದನ್ನು ಕೆಡವಿದ್ದಾನೋ ಎನ್ನುವ ಕುರಿತು ತನಿಖೆ ಮಾಡುವಂತೆಯೂ ಒತ್ತಾಯಿಸಿದ್ದಾರೆ.
ಆರೋಪಿ ಮಹೇಶ ಓಜಿನಹಳ್ಳಿಯನ್ನು ಮುನಿರಾಬಾದ್ ಠಾಣೆಯ ಪೊಲೀಸರು ಈಗಾಗಲೆ ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದು, ಆತನ ಮಾನಸಿಕ ಸ್ಥಿತಿಯ ಸಮಾಲೋಚನೆಯೂ ನಡೆದಿದೆ. ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.