ಮಂಗಳೂರು: ಸಿಟಿ ಬಸ್ ಗಳು ನಗರದ ಸ್ಟೇಟ್ ಬ್ಯಾಂಕ್ ನಲ್ಲಿ ಈ ಹಿಂದಿನಂತೆ ಹ್ಯಾಮಿಲ್ಟನ್ ವೃತ್ತದ ಮತ್ತು ರಾವ್ ಆ್ಯಂಡ್ ರಾವ್ ವೃತ್ತದ ಮೂಲಕ ಹಾದು ಹೋಗುವಂತೆ ವ್ಯವಸ್ಥೆ ಮಾಡಬೇಕು. ವಾರದೊಳಗೆ ಈ ಕುರಿತಂತೆ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ನಗರ ಪೊಲೀಸ್ ಆಯುಕ್ತ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಪರಿಷತ್ ನ ಅಂಗ ಸಂಸ್ಥೆ ಸ್ಟೇಟ್ ಬ್ಯಾಂಕ್ ಪರಿಸರದ ವ್ಯಾಪಾರಿಗಳ ಸೌಹಾರ್ದ ಒಕ್ಕೂಟ ಆಗ್ರಹಿಸಿದೆ
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆ ಗೌರವಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಸಿಟಿ ಬಸ್ ನಗರದ ಸ್ಟೇಟ್ ಬ್ಯಾಂಕ್ ಕೊನೆಯ ಬಸ್ ನಿಲ್ದಾಣ ಬದಲಾದ ಬಳಿಕ ಸ್ಟೇಟ್ ಬ್ಯಾಂಕ್ ನಲ್ಲಿ ವ್ಯಾಪಾರಿಗಳಿಗೆ ತೀವ್ರ ನಷ್ಟ ಉಂಟಾಗಿದೆ ಎಂದು ಆರೋಪಿದರು.
ತೀವ್ರ ನಷ್ಟ ಉಂಟಾಗುವ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು, ಇತರ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು, ಮನಪಾ ಅಯುಕ್ತರಿಗೆ ಮನವಿ ಸಲ್ಲಿಸಿ ಮನವರಿಕೆ ಮಾಡಲಾಗಿದ್ದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ನಗರ ಸಾರಿಗೆ ನಿಯಮಾವಳಿಯಂತೆ ಸಿಟಿ ಬಸ್ ಗಳು ನಿಲ್ದಾಣದೊಳಗೆ ಹೋಗುವಂತಿಲ್ಲ ಅಥವಾ ಅವುಗಳಿಗೆ ನಿಲ್ದಾಣ ಎನ್ನುವುದಿಲ್ಲ, ತಂಗುದಾಣದಲ್ಲಿಯೇ ನಿಂತು ಅಲ್ಲಿಂದಲೇ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಬೇಕು. ಸಿಟಿ ಬಸ್ ಗಳನ್ನು ತಂಗುದಾಣಗೊಳಗೆ ಹೋಗು ವ್ಯವಸ್ಥೆ ಮಾಡಿ ನಿಯಮಾವಳಿ ಉಲ್ಲಂಘಿಸಲಾಗಿದೆ ಎಂದರು.
ಒಕ್ಕೂಟದ ಅಧ್ಯಕ್ಷ ಜಯ ಶೆಟ್ಟಿ, ಉಪಾಧ್ಯಕ್ಷ ಮಹಮ್ಮದ್ ಇಕ್ವಾಲ್, ಕಾರ್ಯದರ್ಶಿ ನಾಗರಾಜ್, ಸದಸ್ಯರಾದ ನವೀನ್ ಡಿ’ಸೋಜಾ, ಹಮೀದ್ ಶಾ ಉಪಸ್ಥಿತರಿದ್ದರು