ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ವರ್ಗದ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ಇಚ್ಛಾಶಕ್ತಿಯಿಂದ ಕೆಲಸ ಮಾಡಬೇಕು: ಸಿದ್ದರಾಮಯ್ಯ

Prasthutha|

- Advertisement -


ಬೆಳಗಾವಿ: ಹಿಂದಿನ ನಮ್ಮ ಕಾಂಗ್ರೆಸ್ ಸರ್ಕಾರ 2014ರಲ್ಲೇ ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ವರ್ಗಗಳ ಪಟ್ಟಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು, ಶಿಫಾರಸು ಮಾಡಿ ಎಂಟು ವರ್ಷಗಳು ಕಳೆದರು ಈ ವರೆಗೆ ಅವರನ್ನು ಎಸ್.ಟಿ ಪಟ್ಟಿಗೆ ಸೇರಿಸದಿರುವುದು ಅನ್ಯಾಯ. ಕೇಂದ್ರಕ್ಕೆ ಸ್ಪಷ್ಟೀಕರಣವನ್ನು ಕೊಟ್ಟು ಕೈಕಟ್ಟಿ ಕೂರುವ ಬದಲು ರಾಜ್ಯ ಸರ್ಕಾರ ಇಚ್ಛಾಶಕ್ತಿಯಿಂದ ಕೆಲಸ ಮಾಡಿ, ಎಸ್,ಟಿ ಪಟ್ಟಿಗೆ ಸೇರಿಸಲು ಕ್ರಮ ವಹಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯ ಮಾಡಿದ್ದಾರೆ.


ವಿಧಾನಸಭೆಯ ಕಲಾಪದಲ್ಲಿ ಮಾತನಾಡಿದ ಅವರು, 2010ರಲ್ಲೇ ಕುಲಶಾಸ್ತ್ರ ಅಧ್ಯಯನ ಮಾಡಿ, ಅನ್ನಪೂರ್ಣಮ್ಮನವರ ನೇತೃತ್ವದ ಸಮಿತಿ ಒಂದು ವರದಿ ನೀಡಿತ್ತು. ಈ ವರದಿಯ ಆಧಾರದ ಮೇಲೆ 2014ರಲ್ಲಿ ಕಾಡುಗೊಲ್ಲರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು ಎಂದು ನಮ್ಮ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿತ್ತು, ಇದಾಗಿ ಎಂಟು ವರ್ಷಗಳು ಕಳೆದಿವೆ. ಕೇಂದ್ರದವರು ನಮ್ಮಿಂದ ಸ್ಪಷ್ಟೀಕರಣ ಕೇಳುತ್ತಲೇ ಇದ್ದಾರೆ, ಕಾಡುಗೊಲ್ಲರು ಪರಿಶಿಷ್ಟ ವರ್ಗದ ಮೀಸಲಾತಿ ಪಡೆಯಲು ಅರ್ಹರು ಎಂದು ಸರ್ಕಾರವೂ ಶಿಫಾರಸು ಮಾಡಿದೆ. ಹೀಗಿದ್ದಾಗ ಮತ್ತೆ ಮತ್ತೆ ವಿಳಂಬ ಮಾಡುವುದು ಸರಿಯಾದ ಕ್ರಮವಲ್ಲ. ಕೇಂದ್ರದಲ್ಲಿ ನಮ್ಮವರೇ ಸಮಾಜ ಕಲ್ಯಾಣ ಸಚಿವರಿದ್ದಾಗ, ಈಗಲಾದರೂ ಕಾಡುಗೊಲ್ಲರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುತ್ತೇನೆ ಎಂದು ಹೇಳಿದರು.

- Advertisement -


ಕಾಡುಗೊಲ್ಲರ ಸಂಸ್ಕೃತಿ, ಜೀವನಶೈಲಿ ಇವೆಲ್ಲವುಗಳನ್ನು ನೋಡಿದರೆ ಆದಿವಾಸಿ ಪಂಗಡವೊಂದಕ್ಕೆ ಇರಬೇಕಾದ ಎಲ್ಲಾ ಗುಣಲಕ್ಷಣಗಳು ಅವರಲ್ಲಿ ಇವೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಸಂಬಂಧಪಟ್ಟ ಸಚಿವರನ್ನು ಸಂಪರ್ಕಿಸಿ, ಅವರ ಮೂಲಕ ಸಂಸತ್ತಿನಲ್ಲಿ ಸಂವಿಧಾನ ತಿದ್ದುಪಡಿ ಮಾಡಿಸಿ ಎಸ್,ಟಿ ಸೇರಿಸುವ ಕೆಲಸ ಮಾಡಬೇಕು. ರಾಜ್ಯ ಸರ್ಕಾರ ಕೇಂದ್ರಕ್ಕೆ ಸ್ಪಷ್ಟೀಕರಣ ನೀಡಿದ್ದೇವೆ, ಅವರು ಮಾಡುತ್ತಾರೆ ಎಂದು ಸುಮ್ಮನೆ ಕೂತರೆ ಆಗಲ್ಲ. ಈ ಬಗ್ಗೆ ಸರ್ಕಾರ ಇಚ್ಛಾಶಕ್ತಿಯನ್ನು ತೋರಿಸಿ ಎಸ್.ಟಿ ಗೆ ಸೇರಿಸಲು ಕ್ರಮ ವಹಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.



Join Whatsapp