ಹಿಜಾಬ್ ಸಂಘರ್ಷ । ಗೌಪ್ಯವಾಗಿ ಮುಸ್ಲಿಮ್ ವಿದ್ಯಾರ್ಥಿಗಳ ದಾಖಲೆ ಸಂಗ್ರಹಕ್ಕೆ ಮುಂದಾದ ರಾಜ್ಯ ಬಿಜೆಪಿ ಸರ್ಕಾರ!

Prasthutha|

ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯ ವಿಚಾರಣೆಯು ನ್ಯಾಯಾಲಯದಲ್ಲಿದ್ದು, ಖಾಸಗಿ ಮತ್ತು ಸರ್ಕಾರಿ ಕಾಲೇಜಿನಲ್ಲಿ ಹಿಜಾಬ್ ಪರ ಹೋರಾಡುವ ಮುಸ್ಲಿಮ್ ವಿದ್ಯಾರ್ಥಿಗಳ ವೈಯಕ್ತಿಕ ದಾಖಲೆಗಳನ್ನು ಗೌಪ್ಯವಾಗಿ ಸಂಗ್ರಹಿಸಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಸರ್ಕಾರಿ ಶಿಕ್ಷಣ ಇಲಾಖೆಯಿಂದ ಪಡೆದ ಅಂಕಿಅಂಶಗಳ ಅನ್ವಯ, ರಾಜ್ಯಾದ್ಯಂತ ವಿವಿಧ ಶಾಲೆಗಳಲ್ಲಿ 17,39,742 ಮುಸ್ಲಿಮ್ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ 1,55,104 ವಿದ್ಯಾರ್ಥಿಗಳಿದ್ದು, ಅತೀ ಹೆಚ್ಚು ಮುಸ್ಲಿಮ್ ವಿದ್ಯಾರ್ಥಿಗಳಿರುವ ಪ್ರದೇಶವಾಗಿದೆ. ಕಲ್ಬುರ್ಗಿಯು 1,31,802 ವಿದ್ಯಾರ್ಥಿಗಳೊಂದಿಗೆ ನಂತರದ ಸ್ಥಾನವನ್ನು ಪಡೆದಿದೆ. ಬೆಂಗಳೂರು ಉತ್ತರದಲ್ಲಿ 1,22, 993 ವಿದ್ಯಾರ್ಥಿಗಳಿದ್ದಾರೆ ಎಂಬುದು ಅಂಕಿಅಂಶಗಳಿಂದ ಬಹಿರಂಗವಾಗಿದೆ. ಅದೇ ರೀತಿ ಚಾಮರಾಜನಗರ ಜಿಲ್ಲೆಯಲ್ಲಿ 9603 ಮುಸ್ಲಿಮ್ ವಿದಾರ್ಥಿಗಳಿದ್ದಾರೆ. ಇದು ರಾಜ್ಯದಲ್ಲೇ ಅತಿ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ಪ್ರದೇಶವಾಗಿದೆ ಎಂದು ಹೇಳಲಾಗಿದೆ.

‘ಸದ್ಯ ರಾಜ್ಯದ ವಿವಿಧ ಕಡೆ ನಡೆಯುತ್ತಿರುವ ಹಿಜಾಬ್ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಲೇಜುಗಳನ್ನು ಸೂಕ್ಷ್ಮ ವಲಯಗಳಾಗಿ ವಿಂಗಡಿಸಲು ಮತ್ತು ಹೆಚ್ಚುವರಿಯಾಗಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲು ನಿರ್ವಹಿಸುತ್ತಿರುವ ಪೂರ್ವಯೋಜಿತ ಕೃತ್ಯ ಎಂದು ತಿಳಿದಿದ್ದೇನೆ’ ಎಂದು ಬೆಂಗಳೂರು ದಕ್ಷಿಣ ಪದವಿಪೂರ್ವ ಕಾಲೇಜು ಪ್ರಾಂಶುಪಾಲರು ತನ್ನ ನಿಲುವನ್ನು ವ್ಯಕ್ತಪಡಿಸಿರುವ ಕುರಿತು ಮಾಧ್ಯಮಗಳು ವರದಿ ಮಾಡಿವೆ.

- Advertisement -

ವಿದ್ಯಾರ್ಥಿಗಳ ದತ್ತಾಂಶಗಳನ್ನು ಸಂಗ್ರಹಿಸುತ್ತಿರುವ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ವಿಧಾನಮಂಡಲ ಅಧಿವೇಶನ ಮತ್ತು ಹೈಕೋರ್ಟ್ ನ ವಿಚಾರಣೆಯ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ತಮ್ಮ ನಡೆಯನ್ನು ಸಮರ್ಥಿಸಿದ್ದಾರೆ.

ಈ ಮಧ್ಯೆ ಹೈಕೋರ್ಟ್ ನ ಮಧ್ಯಂತರ ಆದೇಶವನ್ನು ಪಾಲಿಸಿಲ್ಲ ಎಂಬ ನೆಪದಲ್ಲಿ ರಾಜ್ಯದ 14 ಶಾಲೆಗಳಲ್ಲಿನ ಒಟ್ಟು 162 ವಿದ್ಯಾರ್ಥಿಗಳನ್ನು ಮನೆಗೆ ವಾಪಸ್ ಕಳುಹಿಸಲಾಗಿದೆ ಎಂದು ಅಂಕಿಅಂಶಗಳಿಂದ ಬಹಿರಂಗವಾಗಿವೆ. ಜಿಲ್ಲಾವಾರು ಅಂಕಿಅಂಶಗಳನ್ನು ಅವಲೋಕಿಸಿದರೆ ಬೀದರ್ ನ 7 ಶಾಲೆಯಲ್ಲಿ 114 ವಿದಾರ್ಥಿಗಳು, ಶಿವಮೊಗ್ಗದ ಮೂರು ಶಾಲೆಗಳಲ್ಲಿ 20 ವಿದ್ಯಾರ್ಥಿಗಳು, ಚಿತ್ರದುರ್ಗದ ಎರಡು ಶಾಲೆಗಳಲ್ಲಿ 18 ವಿದ್ಯಾರ್ಥಿಗಳು ಮತ್ತು ಚಿಕ್ಕಮಗಳೂರಿನಲ್ಲಿ ಎಂಟು, ಚಿಕ್ಕಬಳ್ಳಾಪುರದ ಇಬ್ಬರು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.



Join Whatsapp