ಬೆಂಗಳೂರು: ಕಾಲೇಜುಗಳ ಮೇಲ್ವಿಚಾರಣೆಯನ್ನು ಸುಧಾರಿಸಲು ರಾಜ್ಯದ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ವಿನೂತನ ಶೈಲಿಯ 7 ವಿಶ್ವವಿದ್ಯಾನಿಲಯಗಳನ್ನು ಘೋಷಿಸಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
2022-23ನೇ ಬಜೆಟ್‌ನಲ್ಲಿ ಘೋಷಣೆ ಮಾಡಿದಂತೆ ವಿನೂತನ ಮಾದರಿಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಚಾಮರಾಜನಗರ, ಹಾಸನ, ಮಂಡ್ಯ, ಬೀದರ್, ಕೊಡಗು, ಕೊಪ್ಪಳ ಮತ್ತು ಹಾವೇರಿಯಲ್ಲಿ ನೂತನ ವಿವಿ ಸ್ಥಾಪನೆ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ನೂತನ ಮಾದರಿಯ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಸಂಬಂಧ ಜಿ. ಹೇಮಂತ ಕುಮಾರ್, ಕುಲಪತಿಗಳು, ಮೈಸೂರು ವಿಶ್ವವಿದ್ಯಾಲಯ ಇವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ.
ಸಾಂಪ್ರದಾಯಿಕ ವಿಶ್ವವಿದ್ಯಾನಿಲಯಗಳಿಗಿಂತ ಈ ವಿವಿಗಳು ಭಿನ್ನವಾಗಲಿದ್ದು, ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೆ ಗರಿಷ್ಟ ತಂತ್ರಜ್ಞಾನದ ಬಳಕೆಯೊಂದಿಗೆ ಈ ವಿವಿಗಳು ಕಾರ್ಯನಿರ್ವಹಿಸಲಿವೆ.
1 ಮೈಸೂರು ವಿಶ್ವವಿದ್ಯಾಲಯ ಮೂಲ ವಿವಿಯಾಗಿದ್ದು, ಚಾಮರಾಜನಗರದಲ್ಲಿ ಹೊಸದಾಗಿ ವಿವಿ ಆರಂಭಿಸಲು ಉದ್ದೇಶಿಸಲಾಗಿದೆ. ನೂತನ ವಿವಿ ಕೇಂದ್ರ ಸ್ಥಳ ಡಾ. ಬಿ. ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ ಚಾಮರಾಜನಗರ.
*ಮೈಸೂರು ವಿಶ್ವವಿದ್ಯಾಲಯ ಮೂಲ ವಿವಿಯಾಗಿದ್ದು ಹಾಸನದಲ್ಲಿ ಹೊಸ ವಿವಿ ಸ್ಥಾಪನೆಯಾಗಲಿದೆ. ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ, ಹಾಸನ ನೂತನ ವಿವಿ ಕೇಂದ್ರ ಸ್ಥಳವಾಗಲಿದೆ.
*ಮೈಸೂರು ವಿಶ್ವವಿದ್ಯಾಲಯ ಮೂಲ ವಿವಿಯಾಗಿದ್ದು, ಮಂಡ್ಯದಲ್ಲಿ ನೂತನ ವಿವಿ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಸರ್. ಎಂ. ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರ, ಮಂಡ್ಯ ನೂತನ ವಿವಿ ಕೇಂದ್ರ ಸ್ಥಳ.
2 ಗುಲ್ಬರ್ಗ ವಿಶ್ವವಿದ್ಯಾಲಯ ಮೂಲ ವಿಶ್ವವಿದ್ಯಾಲಯವಾಗಿದ್ದು, ಬೀದರ್‌ನಲ್ಲಿ ಹೊಸ ವಿವಿ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ. ಜ್ಞಾನ ಕಾರಂಜಿ, ಹಾಲಹಳ್ಳಿ, ಭಾಲ್ಕಿ ತಾಲೂಕು, ಬೀದರ್ ಜಿಲ್ಲೆ ನೂತನ ವಿವಿ ಕೇಂದ್ರ ಸ್ಥಾನ.
3 ಮಂಗಳೂರು ವಿಶ್ವವಿದ್ಯಾಲಯ ಮೂಲ ವಿವಿ. ಕೊಡಗಿನಲ್ಲಿ ಹೊಸ ವಿವಿ ಸ್ಥಾಪನೆಯಾಗಲಿದೆ. ಚಿಕ್ಕಅಲುವಾರ, ಕುಶಾಲನಗರ ಹೊಸ ವಿವಿ ಕೇಂದ್ರ ಸ್ಥಾನ.
4 ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯ ಮೂಲ ವಿವಿ. ಕೊಪ್ಪಳದಲ್ಲಿ ಹೊಸ ವಿವಿ ನಿರ್ಮಾಣ. 4ನೇ ಮಹಡಿ, ಸರ್ಕಾರಿ ತಾಂತ್ರಿಕ ಮಹಾ ವಿದ್ಯಾಲಯ, ತಳಕಲ್, ಕೊಪ್ಪಳ.
5 ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಮೂಲ ವಿವಿಯಾಗಿದೆ. ಬಾಗಲಕೋಟೆಯಲ್ಲಿ ಹೊಸ ವಿವಿ ನಿರ್ಮಾಣವಾಗಲಿದೆ. ಜಮಖಂಡಿ, ಬಾಗಲಕೋಟೆ ಕೇಂದ್ರ ಸ್ಥಾನ.
6 ಕರ್ನಾಟಕ ವಿಶ್ವವಿದ್ಯಾಲಯ ಮೂಲ ವಿವಿ. ಹಾವೇರಿಯಲ್ಲಿ ನೂತನ ವಿವಿ ನಿರ್ಮಾಣವಾಗಲಿದೆ. ಕರಿಮತ್ತಿಹಳ್ಳಿ, ಹಾವೇರಿ ಕೇಂದ್ರ ಸ್ಥಾನವಾಗಲಿದೆ.