ಮಂಗಳೂರು: ಪ್ರವಾದಿ ನಿಂದನೆ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜು ಮಾಡಿದ ಬಿಜೆಪಿ ವಕ್ತಾರೆಯನ್ನೂ ಮೀರಿಸುವ ರೀತಿಯಲ್ಲಿ ಸಂಘಪರಿವಾರದ ರಾಧಾ ಕೃಷ್ಣ ಅಡ್ಯಂತಾಯ ಎಂಬಾತ ವಿಟ್ಲದಲ್ಲಿ ಮಾಡಿದ ಕೋಮು ಉದ್ರೇಕಕಾರಿ ಭಾಷಣ ಸಾಮಾಜಿಕ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಕುರಿತು ಪೋಲೀಸ್ ಇಲಾಖೆ ರಾಧಾ ಕೃಷ್ಣ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುವಂತೆ ರಾಜ್ಯ ದಾರಿಮಿ ಉಲಮಾ ಒಕ್ಕೂಟ ಆಗ್ರಹಿಸಿದೆ.
ಕೇವಲ ವಿಘ್ನ ಸಂತೋಷಿಗರ ಚಪ್ಪಾಳೆ ಪಡೆಯಲು ಮತ್ತು ರಾಜಕೀಯ ದುರ್ಲಾಭ ಪಡೆಯಲು ಜಗತ್ತಿನಲ್ಲೇ ದ್ವಿತೀಯ ಸ್ಥಾನದಲ್ಲಿರುವ ಇಸ್ಲಾಂ ಧರ್ಮವನ್ನು ತೀರಾ ಅವಹೇಳಕಾರಿಯಾಗಿ ಚಿತ್ರೀಕರಿಸಿ ತನ್ನ ಅನಾಗರಿಕತೆಯನ್ನು ಪ್ರದರ್ಶಿಸಿದ ಈತನ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಿ ಜೈಲಿಗಟ್ಟುವಂತೆ ಪೋಲೀಸ್ ಇಲಾಖೆಯೊಂದಿಗೆ ರಾಜ್ಯ ದಾರಿಮಿ ಉಲಮಾ ಒಕ್ಕೂಟ ಮನವಿ ಮಾಡಿದೆ
ಇಂತಹ ವಿಚ್ಛಿದ್ರಕಾರಿ ವ್ಯಕ್ತಿಗಳನ್ನು ಮಟ್ಟಹಾಕದಿದ್ದರೆ ಅದು ಈ ನಾಡಿನ ಶಾಂತಿಯನ್ನು ಕದಡಿ ದೇಶವನ್ನು ಅರಾಜಕತೆಗೆ ತಳ್ಳುವುದಕ್ಕೆ ಕಾರಣವಾಗುತ್ತದೆ. ವಿವಿಧ ಜಾತಿ ಜನಾಂಗದವರ ಮಧ್ಯೆ ಈ ರೀತಿ ದ್ವೇಷ ಹರಡುವವರ ವಿರುದ್ಧ ಕಾನೂನು ಪಾಲನೆ ಆಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಮಾನ ಮನಸ್ಕರನ್ನು ಸೇರಿಸಿ ಉಗ್ರಹೋರಾಟ ಮಾಡುವ ಅನಿವಾರ್ಯತೆ ಬಂದೊದಗಬಹುದು ಎಂದು ಹೇಳಿದೆ.
ಕಾನೂನು ಪಾಲಕರು ಇದಕ್ಕೆ ಆಸ್ಪದ ನೀಡದೇ ಜಾತಿ ಧರ್ಮದ ಆಧಾರದಲ್ಲಿ ತಾರತಮ್ಯ ನೀತಿ ಅನುಸರಿಸದೇ ಉದ್ರೇಕಕಾರಿ ಭಾಷಣ ಯಾರು ಮಾಡಿದರೂ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುವಂತೆ ದಾರಿಮಿ ಉಲಮಾ ಒಕ್ಕೂಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.