ಬೆಂಗಳೂರು: ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಬಗ್ಗೆ ಸರ್ಕಾರ ಸ್ಪಂದಿಸದಿರುವ ಬಗ್ಗೆ ರಾಜ್ಯ ಗುತ್ತಿಗೆದಾರರ ಸಂಘ ಏಳು ಸಚಿವರಿಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದೆ.
ಏಳು ಮಂದಿ ಸಚಿವರಿಗೆ ಪತ್ರ ಬರೆದ ಕರ್ನಾಟಕ ಕಂಟ್ರಾಕ್ಟರ್ಸ್ ಅಸೋಸಿಯೇಷನ್, ಸಚಿವರು ಹಾಗೂ ಅಧಿಕಾರಿಗಳ ನಡವಳಿಕೆ ವಿರುದ್ಧ ಕಿಡಿಕಾರಿದ್ದಾರೆ. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಮಹದೇವಪ್ಪ, ಸಚಿವ ಜಮೀರ್ ಅಹಮದ್, ಸಚಿವ ಬೋಸರಾಜು, ಸಚಿವ ದಿನೇಶ್ ಗುಂಡೂರಾವ್ ಹಾಗೂ ಸಚಿವ ರಹೀಂ ಖಾನ್ ಗೆ ಪತ್ರ ಬರೆದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಅಧಿಕಾರಿಗಳ ಜೊತೆಗೆ ಚರ್ಚೆಗೆ ಅವಕಾಶ ಕೊಡಿ: ಗುತ್ತಿಗೆದಾರರ ಕುಂದು-ಕೊರತೆಗಳ ಬಗ್ಗೆ ಹಾಗೂ ಗುತ್ತಿಗೆದಾರರ ಬಾಕಿ ಬಿಲ್ ಬಗ್ಗೆ ಸುಮಾರು ಬಾರಿ ತಮ್ಮ ಗಮನಕ್ಕೆ ತಂದಿರುತ್ತೇವೆ. ಆದರೆ ತಾವುಗಳು ಇದುವರೆಗೂ ನಮಗೆ ಯಾವುದೇ ಪತ್ರ ಸಹ ಬರೆದಿಲ್ಲ. ಹೀಗಾಗಿ, ಸಭೆ ಕರೆದು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚಿಸಲು ಅವಕಾಶ ಮಾಡಿಕೊಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.