ರಾಜ್ಯ ಬಿಜೆಪಿ ಸರ್ಕಾರದಿಂದ ಬಿಲ್ಲವ ಸಮಾಜಕ್ಕೆ ನಿರಂತರ ಅವಮಾನ: ಸತ್ಯಜಿತ್‌ ಸುರತ್ಕಲ್

Prasthutha|

ಮಂಗಳೂರು: ಸಮಾಜ ಸುಧಾರಕ ನಾರಾಯಣ ಗುರುಗಳ ಜಯಂತಿ ಸರಕಾರಿ ಕಾರ್ಯಕ್ರಮವಾಗಿದ್ದು, ಇದರಲ್ಲಿ ಮುಖ್ಯಮಂತ್ರಿ ಸೇರಿದಂತೆ ಸಚಿವರು ಭಾಗವಹಿಸುವುದು ಸಂಪ್ರದಾಯ. ಆದರೆ ಈಗಿನ ಮುಖ್ಯಮಂತ್ರಿಯಾಗಲಿ, ಮುಖ್ಯ ಕಾರ್ಯದರ್ಶಿಗಳಾಗಲಿ ಯಾವುದೇ ಗಣ್ಯರು ಗುರು ಜಯಂತಿಯಲ್ಲಿ ಭಾಗವಹಿಸಿಲ್ಲ. ಸಣ್ಣ ಸಭಾಂಗಣದಲ್ಲಿ ಗುರು ಜಯಂತಿ ಮಾಡುವ ಮೂಲಕ ಗುರುಗಳಿಗೆ ಅವಮಾನ ಮಾಡಿದ್ದಾರೆ ಎಂದು ನಾರಾಯಣ ಗುರು ವಿಚಾರ ವೇದಿಕೆ ಸಂಚಾಲಕ ಸತ್ಯಜಿತ್ ಸುರತ್ಕಲ್ ಆರೋಪಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾರಾಯಣ ಗುರು ವಿಚಾರ ವೇದಿಕೆ ಕಳೆದ ವರ್ಷ ಬೆಂಗಳೂರಿನಲ್ಲಿ ಆರಂಭವಾಗಿದೆ. ಮುಖ್ಯವಾಗಿ ನಾರಾಯಣ ಗುರುಗಳ ಸ್ವಾಭಿಮಾನದ ಬದುಕನ್ನು ಕಾಣುತ್ತಿರುವ ಈ ಸಮಾಜಕ್ಕೆ ಯಾವುದೇ ಕ್ಷೇತ್ರದಲ್ಲಿ ಸರಿಯಾದ ನ್ಯಾಯ ದೊರೆತಿಲ್ಲ. ಅದಕ್ಕೆ ಹೋರಾಡುವುದು ನಮ್ಮ ಕರ್ತವ್ಯ ಎಂದು ಅವರು ಹೇಳಿದರು.

 ಗುರುಗಳ ಸ್ತಬ್ಧ ಚಿತ್ರವನ್ನು ಗಣರಾಜ್ಯೋತ್ಸವ ಪರೇಡ್ ನಲ್ಲಿ ತೆಗೆದಾಗ, ಕರ್ನಾಟಕ ಸರ್ಕಾರ ನೇಮಿಸಿದ್ದ ಸಮಿತಿ ಪುಸ್ತಕ ತಿರುಚಿದಾಗ ವೇದಿಕೆಯು ಹೋರಾಟಗಳನ್ನು ಯಶಸ್ವಿಯಾಗಿ ನಡೆಸಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂಗಾರಪ್ಪನವರ ಹೆಸರು ಇಡಲು ಒತ್ತಾಯಿಸಿ ಹೋರಾಟ ನಡೆಸಿದೆ. ಶಿವಮೊಗ್ಗದಲ್ಲಿ ವೈದ್ಯಕೀಯ ಶಿಬಿರ ಮೊದಲಾದ ಸಮಾಜ ಸೇವೆಗಳಲ್ಲೂ ವೇದಿಕೆ ತೊಡಗಿಕೊಂಡಿದೆ. ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಸಮಾಜವಾದ್ದರಿಂದ ಗುರುಗಳ ಹೆಸರಲ್ಲಿ ಒಂದು ಅಭಿವೃದ್ಧಿ ನಿಗಮದ ಅಗತ್ಯವಿದ್ದು ಅದರ ಬೇಡಿಕೆ ಇಟ್ಟು  ಹೋರಾಡುತ್ತಿದೆ. ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ ಹೆಸರು ಇಡುವಲ್ಲೂ ರಾಜಕೀಯದವರ ನಾಟಕ ನಡೆದಿದೆ ಎಂದು ಅವರು ಆರೋಪಿಸಿದರು.

- Advertisement -

ರಾಜಕೀಯವಾಗಿ ಸಮಾಜವನ್ನು ತುಳಿಯುವ ಕೆಲಸ ನಡೆಯುತ್ತಿದೆ. ಈಗಿನ ಸರಕಾರವಂತೂ ಸಮಾಜದ ದಾರಿ ತಪ್ಪಿಸುವುದರ ಹೊರತಾಗಿ ಬೇರೆ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ನೇರವಾಗಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.

ಸಮಾಜಕ್ಕೆ ನಿಗಮ ಮಂಡಳಿ ಸ್ಥಾಪಿಸದೆ ಯಾವುದೋ ಮಠಕ್ಕೆ ಅನುದಾನ ನೀಡಿದರೆ ಅದು ಸಮಾಜಕ್ಕೆ ಸೇರುವುದಿಲ್ಲ. ಬ್ರಹ್ಮಾವರದಲ್ಲಿ ನಡೆದ ಸಮಾವೇಶದಲ್ಲಿ ಯಾವುದೇ ಜಾತಿ ನಿಗಮ ಸ್ಥಾಪಿಸುವುದಿಲ್ಲ ಎಂದರು. ಅದಾದ ಬಳಿಕ  ಮರಾಠಾ ನಿಗಮ ಘೋಷಿಸಲಾಯಿತು. ಆದ್ದರಿಂದ ಸಮಾಜದ ಅಭಿವೃದ್ಧಿಗೆ ತೀವ್ರ ಹೋರಾಟ ನಡೆಸಲು ನಾವು ತೀರ್ಮಾನ ಮಾಡಿದ್ದೇವೆ ಎಂದು ಸತ್ಯಜಿತ್‌ ಹೇಳಿದರು.

ಗುಲ್ಬರ್ಗದ ಗುತ್ತೇದಾರ್, ಬೆಂಗಳೂರಿನ ತಿಮ್ಮೇಗೌಡ, ಇಲ್ಲಿಂದ ನಾನು ಎಂದು ರಾಜ್ಯದ ಎಲ್ಲ ಬಿಲ್ಲವ ಸಮಾನ ಜಾತಿ ನಾಯಕರು ಇದರಲ್ಲಿ ತೊಡಗಿಕೊಂಡಿದ್ದಾರೆ. ಬಿಜೆಪಿ ಸರಕಾರದಲ್ಲಿ ಬಿಲ್ಲವ ಸಚಿವರಿದ್ದರೂ ಅವರಿಂದ ಬಿಲ್ಲವ ಸಮಾಜಕ್ಕೆ ಯಾವುದೇ ಲಾಭವಾಗಿಲ್ಲ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಕೇಶವಮೂರ್ತಿ, ರಾಘವೇಂದ್ರ ಮೊದಲಾದ ಸಮಾಜದ ನಾಯಕರು ಉಪಸ್ಥಿತರಿದ್ದರು.

Join Whatsapp