ನರಸಿಂಹರಾಜಪುರ: ‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಕೋಮುಗಲಭೆಗೆ ಬಿಜೆಪಿ ಸರ್ಕಾರವೇ ಪ್ರಚೋದನೆ ನೀಡುತ್ತಿರುವುದರಿಂದ ಅಮಾಯಕ ಹಿಂದೂ ಹಾಗೂ ಮುಸ್ಲಿಂ ಯುವಕರು ಬಲಿಯಾಗುತ್ತಿದ್ದಾರೆ ಎಂದು ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಗೇರುಬೈಲು ನಟರಾಜ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೋಮುಗಲಭೆಯನ್ನು ನಿಯಂತ್ರಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ .ಹೆಚ್ಚಿನ ಸಚಿವರು 40% ಕಮಿಷನ್ ದಂಧೆಗೆ ಇಳಿದಿದ್ದಾರೆ’ ಎಂದು ಆರೋಪಿಸಿದರು.
ಪ್ರವೀಣ್ ನೆಟ್ಟಾರು ಹಾಗೂ ಮಸೂದ್ ಅಕ್ಕಪಕ್ಕದ ಪ್ರದೇಶದವರಾಗಿದ್ದು ಮುಖ್ಯಮಂತ್ರಿಗಳು ಪ್ರವೀಣ್ ಮನೆಗೆ ಭೇಟಿ ನೀಡಿ ಮಸೂದ್ ಮನೆಗೆ ಭೇಟಿ ನೀಡದೆ ಪರಿಹಾರವನ್ನೂ ಘೋಷಿಸದೆ ತಾರತಮ್ಯ ಮಾಡಿರುವುದನ್ನು ಪಕ್ಷ ಖಂಡಿಸುತ್ತದೆ ಎಂದು ಹೇಳಿದರು.
ಫಾಝಿಲ್ ಎಂಬ ಯುವಕನನ್ನು ಕೊಂದವರನ್ನು ಸರ್ಕಾರ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ಕೊಲೆಯಾದ ಯುವಕನ ಕುಟುಂಬಕ್ಕೂ ಸೂಕ್ತ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು. ಕೋಮು ಗಲಭೆ ಸೃಷ್ಟಿಸುವ ನಿಟ್ಟಿನಲ್ಲಿ ಪ್ರಚೋದನೆ ಹೇಳಿಕೆ ನೀಡುವವರು ಯಾವುದೇ ಧರ್ಮದವರಾದರೂ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಬೆನ್ನಿ, ಸುನಿಲ್ ಕುಮಾರ್, ಸುಂದರೇಶ್, ಜುಬೇದಾ, ಪ್ರಶಾಂತ್ ಶೆಟ್ಟಿ, ಪಾಪಚ್ಚ, ರಾಜೇಂದ್ರ, ಈ.ಸಿ.ಜೋಯಿ, ಉಪೇಂದ್ರ, ಸದಾಶಿವ ಉಪಸ್ಥಿತರಿದ್ದರು.