►ರಾಜ್ಯ ಕಾಂಗ್ರೆಸ್ ಸರಕಾರದ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ
ಬೆಂಗಳೂರು : ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ 2023-2024ನೇ ಸಾಲಿನ ರಾಜ್ಯಮಟ್ಟದ ಪ್ರಾಚಾರ್ಯ ಪ್ರಶಸ್ತಿ ಪ್ರಕಟವಾಗಿದ್ದು, ಈ ಬಾರಿಯ ಪ್ರಶಸ್ತಿಗೆ ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ರಾಮಕೃಷ್ಣ ಬಿ.ಜಿ. ಆಯ್ಕೆಯಾಗಿದ್ದಾರೆ. ಉಡುಪಿ ಜಿಲ್ಲೆಯ ಹಿಜಾಬ್ ಪ್ರಕರಣದ ವೇಳೆ ವಿವಾದಕ್ಕೀಡಾಗಿದ್ದ ಪ್ರಾಂಶುಪಾಲರಿಗೆ ಪ್ರಶಸ್ತಿ ಪ್ರಕಟಿಸಿರುವ ಕಾಂಗ್ರೆಸ್ ಸರಕಾರದ ಈ ಆಯ್ಕೆ ವಿವಾದ ಸೃಷ್ಟಿಸಿದೆ.
ಸೆ.5ರಂದು ‘ಶಿಕ್ಷಕರ ದಿನಾಚರಣೆ’ಯ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಇಬ್ಬರು ಉತ್ತಮ ಪ್ರಾಂಶುಪಾಲರು ಮತ್ತು 8 ಉಪನ್ಯಾಸಕರಿಗೆ ರಾಜ್ಯಮಟ್ಟದ ಪ್ರಶಸ್ತಿಯನ್ನು ಘೋಷಣೆ ಮಾಡಿದೆ.
ಪ್ರಾಂಶುಪಾಲ ಬಿ.ಜಿ ರಾಮಕೃಷ್ಣ ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಹಿಜಾಬ್ ವಿವಾದ ತಲೆದೋರಿದಾಗ ವಿವಾದಕ್ಕೀಡಾಗಿದ್ದರು. ಕುಂದಾಪುರದ ಸರ್ಕಾರಿ ಜೂನಿಯರ್ ಕಾಲೇಜಿಗೆ ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರನ್ನು ಗೇಟ್ ನಲ್ಲಿಯೇ ತಡೆದು ಪ್ರವೇಶ ನಿರಾಕರಿಸಿದ್ದರು. ವಿದ್ಯಾರ್ಥಿನಿಯರನ್ನು ಗೇಟ್‌ನಿಂದ ಹೊರಗೆ ಕಳುಹಿಸಿ ಸ್ವತಃ ತಮ್ಮ ಕೈಯಾರೆ ಕಾಲೇಜು ಗೇಟ್ ಬಂದ್ ಮಾಡಿದ್ದರು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.
ಕಾಲೇಜಿಗೆ ಪ್ರವೇಶ ನೀಡುವಂತೆ ಹಿಜಾಬ್ ವಿದ್ಯಾರ್ಥಿನಿಯರು ಪರಿಪರಿಯಾಗಿ ಬೇಡಿಕೊಂಡು ಕಣ್ಣೀರು ಹಾಕಿದ್ದರು. ಪರೀಕ್ಷೆ ಎರಡು ತಿಂಗಳು ಇರುವಾಗ ಏಕಾಏಕಿ ಹಿಜಾಬ್ ಧರಿಸುವಂತಿಲ್ಲ ಎಂಬ ನಿಯಮ ಜಾರಿಗೊಳಿಸುವುದು ಸರಿಯಲ್ಲ. ನಮಗೆ ಶಿಕ್ಷಣವೂ ಬೇಕು, ಹಿಜಾಬ್ ಧರಿಸಲು ಅವಕಾಶವನ್ನೂ ನೀಡಬೇಕು ಎಂದು ಆಗ್ರಹಿಸಿದರೂ ವಿದ್ಯಾರ್ಥಿನಿಯರ ಬೇಡಿಕೆಗೆ ಪ್ರಾಂಶುಪಾಲರು ಕಿವಿಗೊಡದೆ ಕಾಲೇಜು ಗೇಟ್ ಹಾಕಿದ್ದರು.
ಅವರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿ ಸರಕಾರವನ್ನು ಮೆಚ್ಚಿಸಲು ಪ್ರಾಂಶುಪಾಲರು ಗೇಟ್‌ಕೀಪರ್ ಕೆಲಸವನ್ನೂ ಮಾಡಿದ್ದಾರೆ ಎಂಬ ಟೀಕೆ ಎದುರಾಗಿತ್ತು.
ಪ್ರಾಂಶುಪಾಲರಾಗಿ ರಾಮಕೃಷ್ಣ ಬಿ.ಜಿ ತೆಗೆದುಕೊಂಡ ಕ್ರಮದಿಂದ ಕೆಲ ವಿದ್ಯಾರ್ಥಿನಿಯರು ಶಿಕ್ಷಣವನ್ನು ತೊರೆದು ಮನೆಯಲ್ಲಿಯೇ ಇರುವ ಪರಿಸ್ಥಿತಿ ತಂದೊಡ್ಡಿದೆ ಎಂಬ ಆರೋಪ ಕೂಡ ಇದೆ. ಅದೇ ಪ್ರಾಂಶುಪಾಲರಿಗೆ ಕಾಂಗ್ರೆಸ್ ಸರಕಾರ ರಾಜ್ಯ ಪ್ರಶಸ್ತಿ ಪ್ರಕಟಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
“ಕಾಂಗ್ರೆಸ್ ಸರ್ಕಾರ ಬಂದರೆ ಅಲ್ಪಸಂಖ್ಯಾತರಿಗೆ ರಕ್ಷಣೆ, ಹಿಜಾಬ್ ಗೆ ಅವಕಾಶ ಎಂದು ಹೇಳಿದವರು ಈಗ ಯಾಕೆ ಹಿಜಾಬ್ ವಿರೋಧಿ ಪ್ರಾಂಶುಪಾಲರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದಾರೆ” ಎಂಬ ಆಕ್ರೋಶದ ಮಾತುಗಳು ಕೇಳಿಬಂದಿವೆ.
“ಹಿಜಾಬ್ ಪ್ರಕರಣದ ವಿವಾದಿತ ಪ್ರಾಂಶುಪಾಲರಿಗೆ ಈಗ ರಾಜ್ಯ ಮಟ್ಟದ ಪ್ರಾಚಾರ್ಯ ಪ್ರಶಸ್ತಿ ನೀಡುವ ಮೂಲಕ ಕಾಂಗ್ರೆಸ್ ಸರಕಾರ ಏನು ಸಂದೇಶ ನೀಡಿದೆ” ಎಂಬ ಪ್ರಶ್ನೆ ಎದುರಾಗಿವೆ.
“ಸಂಘಪರಿವಾರದ ಷಡ್ಯಂತ್ರಕ್ಕೆ ಪೂರಕವಾಗಿ ಹಿಜಾಬ್ ವಿದ್ಯಾರ್ಥಿನಿಯರ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿರುವ ಪ್ರಾಂಶುಪಾಲರಿಗೆ ಕಾಂಗ್ರೆಸ್ ಸರಕಾರ ರಾಜ್ಯಮಟ್ಟದ ಪ್ರಾಚಾರ್ಯ ಪ್ರಶಸ್ತಿ ನೀಡಿ ಗೌರವಿಸುವುದು ಎಷ್ಟು ಸರಿ” ಎಂಬ ಪ್ರಶ್ನೆ ಕೇಳಿಬಂದಿವೆ. “ಜಾತ್ಯಾತೀತ ಸರಕಾರವೊಂದು ಕೋಮುವಾದಿ ಕಾರ್ಯಸೂಚಿಗಳಿಗೆ ಪೂರಕವಾಗಿ ಕೆಲಸ ಮಾಡಿರುವ ಪ್ರಾಂಶುಪಾಲರಿಗೆ ಪ್ರಶಸ್ತಿ ನೀಡುವುದು ಸೈದ್ಧಾಂತಿಕ ದಿವಾಳಿತನದ ಸೂಚಕ” ಎಂಬ ಟೀಕೆಗಳು ವ್ಯಕ್ತವಾಗಿದೆ.
“ಅಲ್ಪಸಂಖ್ಯಾತರ ರಕ್ಷಣೆಯ ಭರವಸೆ ನೀಡುವ ಕಾಂಗ್ರೆಸ್ ಸರಕಾರ, ಅಲ್ಪಸಂಖ್ಯಾತರನ್ನು ರಸ್ತೆಗೆ ದೂಡಿದವರಿಗೆ ಪ್ರಶಸ್ತಿ ಕೊಟ್ಟರೆ ಅಲ್ಪಸಂಖ್ಯಾತರ ರಕ್ಷಣೆಯಾಗುತ್ತದೆಯೇ” ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರಕಾರ ರಾಮಕೃಷ್ಣ ಬಿ.ಜಿ ಅವರಿಗೆ ಪ್ರಕಟಿರುವ ಪ್ರಾಚಾರ್ಯ ಪ್ರಶಸ್ತಿಯನ್ನು ವಾಪಸ್ ಪಡೆದುಕೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.