ಬೆಂಗಳೂರು : ಭ್ರೂಣ ಹತ್ಯೆ ತಡೆಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು PC&PNDT ಕಾಯ್ದೆ ಅಡಿ ರಚಿಸಲಾಗಿದ್ದ ಮೇಲ್ವಿಚಾರಣಾ ಸಮಿತಿಯ ಜೊತೆ ಸಭೆ ನಡೆಸಿದ ಅವರು, ಭ್ರೂಣ ಹತ್ಯೆ ವಿಚಾರದಲ್ಲಿ ಜಾಗೃತಿಯ ಜೊತೆಗೆ ಕಠಿಣ ಕ್ರಮಗಳು ಆಗಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ಮೇಲ್ವಿಚಾರಣಾ ಸಮಿತಿಯ ಮೊದಲ ಸಭೆ ಇಂದು ಸೇರಲಾಗಿತ್ತು. ನಾಲ್ವರು ಶಾಸಕಿಯರು ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಮಿತಿಯ ಸದಸ್ಯರಿದ್ದಾರೆ. ಭ್ರೂಣ ಹತ್ಯೆ ತಡೆ ನಿಟ್ಟಿನಲ್ಲಿ ಶಾಸಕಿ ರೂಪಕಲಾ, ನಯನಾ ಮೊಟಮ್ಮ, ಲತಾ ಮಲ್ಲಿಕಾರ್ಜುನ್ ಅವರುಗಳು ತಮ್ಮ ಸಲಹೆಗಳನ್ನ ನೀಡಿದ್ದಾರೆ. ಪ್ರತಿ ಹಂತದಲ್ಲಿ ಮೇಲ್ವಿಚಾರಣೆ ನಡೆಸುವುದರ ಜೊತೆಗೆ, ಹೆಣ್ಣು ಮಕ್ಕಳು ಸಮಾಜಕ್ಕೆ ಎಷ್ಟು ಮುಖ್ಯ ಎಂಬುದರ ಬಗ್ಗೆ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.