ಭೀಮಾ ಕೋರೆಗಾಂವ್ ಪ್ರಕರಣ : ಜೈಲಿನಲ್ಲೇ ಸ್ಟ್ಯಾನ್ ಸ್ವಾಮಿ ನಿಧನ !

Prasthutha|

►ನೀರು ಕುಡಿಯಲು ಸ್ಟ್ರಾ ಬಳಕೆಯ ಅನುಮತಿಗೆ 17 ದಿನಗಳ ಅವಕಾಶ ಕೋರಿದ್ದ NIA !!

- Advertisement -

ಮುಂಬೈ : ಎಲ್ಗಾರ್ ಪರಿಷದ್ – ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿದ್ದ ಸಾಮಾಜಿಕ ಕಾರ್ಯಕರ್ತ ಫಾದರ್ ಸ್ಟಾನ್ ಸ್ವಾಮಿ ಸೋಮವಾರ ಮುಂಬೈಯ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಮಧ್ಯಾಹ್ನ 1.30ಕ್ಕೆ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.


ಸ್ವಾಮಿ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ಬಾಂಬೆ ಹೈಕೋರ್ಟ್‌ಗೆ ಸ್ವಾಮಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಹೋಲಿ ಫ್ಯಾಮಿಲಿ ಆಸ್ಪತ್ರೆಯ ವೈದ್ಯರೊಬ್ಬರು ಈ ಬಗ್ಗೆ ಮಾಹಿತಿ ನೀಡಿದರು. ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಸ್ವಾಮಿಯನ್ನು ಭಾನುವಾರ ಮುಂಜಾನೆಯಿಂದ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಕೋವಿಡ್ ಪಾಸಿಟಿವ್ ಎಂದು ಪತ್ತೆಯಾದ ನಂತರ ಅವರನ್ನು ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.

- Advertisement -

ಸ್ಟಾನ್ ಸ್ವಾಮಿ ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರ ಆರೋಗ್ಯ ಪರಿಸ್ಥಿತಿ ಕಳವಳಕಾರಿಯಾಗಿತ್ತು. ಬುಡಕಟ್ಟು ಸಮುದಾಯ ಹಕ್ಕುಗಳ ಹೋರಾಟಗಾರರೂ ಆಗಿದ್ದ ಸ್ಟಾನ್ ಸ್ವಾಮಿ ಅವರನ್ನು ಐಸಿಯುನಲ್ಲಿ ಇಟ್ಟು ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ, ಇತ್ತೀಚೆಗೆ ಅವರ ಆಕ್ಸಿಜನ್ ಮತ್ತು ಹಾರ್ಟ್ ರೇಟ್ ಗಳಲ್ಲಿ ವ್ಯತ್ಯಯವಾದ್ದರಿಂದ ವೆಂಟಿಲೇಟರ್ ಗೆ ಭಾನುವಾರ ಸ್ಥಳಾಂತರಿಸಲಾಗಿತ್ತು.


ನ್ಯಾಯಾಂಗ ಬಂಧನಕ್ಕೂ ಮುನ್ನ ಆರೋಗ್ಯವಾಗಿದ್ದ ಸ್ಟ್ಯಾನ್ ಸ್ವಾಮಿ ಅವರ ಆರೋಗ್ಯ ಸ್ಥಿತಿ ಈ ಮಟ್ಟಕ್ಕೆ ತಲುಪಿರುವ ವಿಚಾರವನ್ನು ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಪಿಯುಡಿಆರ್) ಮತ್ತು ಇತರ ಕೆಲವು ಸಂಘಟನೆಗಳು ಬಾಂಬೆ ಹೈಕೋರ್ಟ್ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಗಮನಕ್ಕೆ ತಂದಿದ್ದವು. ಮಾನವ ಹಕ್ಕು ಆಯೋಗ ಈ ಸಂಬಂಧ ನಿನ್ನೆ ಮಹಾರಾಷ್ಟ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದ್ದು, ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿತ್ತು. ಮಾತ್ರವಲ್ಲ ಸೂಕ್ತ ಚಿಕಿತ್ಸೆ ವ್ಯವಸ್ಥೆ ನೀಡುವಂತೆಯೂ ಸೂಚಿಸಿತ್ತು.

ನಾಳೆ ನಡೆಯಬೇಕಿದ್ದ ಜಾಮೀನು ಅರ್ಜಿ ವಿಚಾರಣೆ

ಬಾಂಬೆ ಹೈಕೋರ್ಟ್ ನಾಳೆ ಮಂಗಳವಾರ ಸ್ಟ್ಯಾನ್ ಸ್ವಾಮಿ ಅವರಿಗೆ ಜಾಮೀನು ನೀಡಬೇಕೆಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಲಿದೆ. ಇದರ ಮಧ್ಯೆಯೇ ಇಂದು ಸ್ವಾಮಿ ಇಹಲೋಕ ತ್ಯಜಿಸಿದ್ದಾರೆ.


ಈ ಹಿಂದೆ ಸ್ವಾಮಿ ಅವರು ನೀರು ಕುಡಿಯಲು ಸ್ಟ್ರಾ ಬಳಕೆಯ ಅನುಮತಿ ಕೋರಿದ್ದರು. ಈ ಬಗ್ಗೆ ನಿಲುವು ತಿಳಿಸಲು 17 ದಿನಗಳ ಕಾಲಾವಕಾಶವನ್ನು ಎನ್ಐಎ ಕೋರಿತ್ತು. ಇದು ಭಾರೀ ಆಕ್ರೋಶಕ್ಕೂ ಕಾರಣವಾಗಿತ್ತು.



Join Whatsapp