ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಅದ್ಭುತ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದು, ದ್ರಾವಿಡ ಕುಟುಂಬದ ನೆಲವು ಬಿಜೆಪಿಯನ್ನು ದೂರವಿರಿಸಿದೆ ಎಂದು ಹೇಳಿದ್ದಾರೆ.
ಈಗ ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಪುನಃಸ್ಥಾಪಿಸುವುದಕ್ಕಾಗಿ 2024ರ ಚುನಾವಣೆ ಗೆಲ್ಲಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಸ್ಟಾಲಿನ್ ಹೇಳಿದ್ದಾರೆ.
ಕರ್ನಾಟಕದ ಅದ್ಭುತ ಗೆಲುವಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು. ಸಹೋದರ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವುದು, ರಾಜಕೀಯ ವಿರೋಧಿಗಳ ವಿರುದ್ಧ ಪ್ರಧಾನ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವುದು, ಹಿಂದಿ ಹೇರಿಕೆ, ಅವ್ಯಾಹತ ಭ್ರಷ್ಟಾಚಾರ ಇವೆಲ್ಲವೂ ಮತದಾನದ ವೇಳೆ ಕರ್ನಾಟಕದ ಜನರ ಮನದಲ್ಲಿ ಪ್ರತಿಧ್ವನಿಸಿ ಬಿಜೆಪಿಗೆ ತಕ್ಕ ಪಾಠ ಕಲಿಸುವ ಮೂಲಕ ಕನ್ನಡಿಗರ ಅಭಿಮಾನವನ್ನು ಎತ್ತಿ ಹಿಡಿದಿವೆ.
ದ್ರಾವಿಡ ಕುಟುಂಬದ ನೆಲ ಬಿಜೆಪಿಯಿಂದ ಮುಕ್ತವಾಗಿದೆ. ಈಗ ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಪುನಃಸ್ಥಾಪಿಸಲು 2024 ಅನ್ನು ಗೆಲ್ಲಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.