ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕರಾಗಿರುವ ಸ್ಟಾಲಿನ್ ಅವರು 70ನೇ ಸಂವತ್ಸರಕ್ಕೆ ಕಾಲಿಟ್ಟಿದ್ದು, ಮಾರ್ಚ್ 1ರಂದು ಹುಟ್ಟುಹಬ್ಬ ಆಚರಿಸಲಿದ್ದಾರೆ.
ಅವರ ಹುಟ್ಟುಹಬ್ಬವನ್ನು ವಿಷೇಶವಾಗಿ ಆಚರಿಸಲು ಡಿಎಂಕೆ ಪಕ್ಷ ತೀರ್ಮಾನಿಸಿದ್ದು, ಕಾರ್ಯಕ್ರಮವನ್ನು ಮಾರ್ಚ್ 1ರಂದು ನಿಗದಿಪಡಿಸಲಾಗಿದೆ. ಅದೇ ದಿನ ಹುಟ್ಟಿದ ಮಕ್ಕಳಿಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಡಿಎಂಕೆ ಮೂಲಗಳು ತಿಳಿಸಿವೆ.
ಇದಲ್ಲದೆ, ವಿವಿಧ ಕಲ್ಯಾಣ ಯೋಜನೆಗಳನ್ನು ಸಹ ಯೋಜಿಸಲಾಗಿದೆ. ನವಜಾತ ಶಿಶುಗಳಿಗೆ ಚಿನ್ನದ ಉಂಗುರ, ರೈತರಿಗೆ ಸಸಿ, ರಕ್ತದಾನ ಶಿಬಿರಗಳು, ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ, ಔತಣ ಕೂಟ, ನೇತ್ರ ಶಿಬಿರಗಳಂತಹ ಹತ್ತಾರು ಕಾರ್ಯಕ್ರಮಗಳು ರಾಜ್ಯಾದ್ಯಂತ ನಡೆಸಲು ಉದ್ದೇಶಿಸಲಾಗಿದೆ.
ಕ್ರಿಕೆಟ್, ಕಬಡ್ಡಿ ಪಂದ್ಯಾವಳಿಗಳು ಮತ್ತು ಮ್ಯಾರಥಾನ್ ಕಾರ್ಯಕ್ರಮಗಳನ್ನು ಸಹ ಡಿಎಂಕೆ ಯೋಜಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಜಮ್ಮು- ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಬಿಹಾರದ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಸೇರಿದಂತೆ ರಾಜಕೀಯ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.