ಬೆಂಗಳೂರು : 2021-22 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದಲ್ಲಿ SSLC ಪರೀಕ್ಷೆ ಹಳೆಯ ಪದ್ಧತಿಯಂತೆ ನಡೆಯಲಿದೆ. ಈ ವಿಚಾರದಲ್ಲಿ ಯಾವುದೇ ಗೊಂದಲವೂ ಬೇಡ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಆತಂಕ ಪಡೆಯುವುದು ಬೇಡ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಹೇಳಿದ್ದಾರೆ.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಹಳೆಯ ಪದ್ಧತಿಯಂತೆ ಪರೀಕ್ಷೆ ನಡೆಯಲಿದೆ. ಈ ವಿಚಾರದಲ್ಲಿ ಯಾವುದೇ ಗೊಂದಲವೂ ಬೇಡ, ಶಾಲೆಗಳು ಆತಂಕ ಪಡೆಯುವುದು ಬೇಡ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಈ ಹಿಂದಿನ ಪದ್ದತಿಯಂತೆ ಪ್ರತಿ ವಿಷಯಕ್ಕೂ 80 ಅಂಕದಂತೆ ಲಿಖಿತ ಪರಿಕ್ಷೆ ನಡೆಯಲು ತೀರ್ಮಾನಿಸಲಾಗಿದೆ. ಹಳೇ ಪ್ರಶ್ನೆ ಪತ್ರಿಕೆ ಪದ್ಧತಿಯಲ್ಲಿಯೇ ಈ ಶೈಕ್ಷಣಿಕ ವರ್ಷದ ಪರೀಕ್ಷೆ ಇರಲಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಒಂದೂವರೆ ವರ್ಷದಿಂದ ಶಾಲೆಗಳು ಬಂದ್ ಆಗಿದ್ದವು. ಈ ಹಿನ್ನೆಲೆಯಲ್ಲಿ 2020-21 ನೇ ಸಾಲಿನಲ್ಲಿ ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಲಾಗಿತ್ತು. ಆದರೆ, SSLC ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೇ ಉತ್ತೀರ್ಣ ಮಾಡಲು ಮಾನದಂಡ ಅನುಸರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ SSLC ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಬಹು ಅಯ್ಕೆ ಪ್ರಶ್ನೆ ಪತ್ರಿಕೆ ನೀಡಲಾಗಿತ್ತು. ಮೂರು ವಿಷಯಗಳನ್ನು ಒಂದು ವಿಷಯವನ್ನಾಗಿ ಮಾಡಿ ಎರಡು ದಿನ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿಯೂ ಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆ ಇರಲಿದೆಯಾ ಎಂಬ ಗೊಂದಲ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಲ್ಲಿ ಮೂಡಿದ ಹಿನ್ನೆಲೆಯಲ್ಲಿ ಸದ್ಯ ಶಿಕ್ಷಣ ಸಚಿವರು ಸ್ಪಷ್ಟನೆ ನೀಡಿದ್ದಾರೆ.