ಬೆಂಗಳೂರು: ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ರಾಮನಗರ ಪೊಲೀಸರು ಮಾಗಡಿಯ ಖಾಸಗಿ ಶಾಲೆಯ ಗುಮಾಸ್ತನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಾಗಡಿಯ ಕೆಂಪೇಗೌಡ ಪ್ರೌಢಶಾಲೆಯ ಗುಮಾಸ್ತ ರಂಗೇಗೌಡ ಎಂದು ಗುರುತಿಸಲಾಗಿದೆ.
ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ವಿಜ್ಞಾನ ಪತ್ರಿಕೆಯು ವಾಟ್ಸಪ್ ಮೂಲಕ ಸೋರಿಕೆ ಆಗಿತ್ತು. ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭವಾಗಿತ್ತು. ಅದೇ ಸಮಯದಲ್ಲಿ ಪ್ರಶ್ನೆ ಪತ್ರಿಕೆಯನ್ನು ಮುಖ್ಯೋಪಾಧ್ಯಾಯ ಹಾಗೂ ಶಿಕ್ಷಕರಿರುವ ಗ್ರೂಪ್‌ನಲ್ಲೇ ಶೇರ್ ಮಾಡಲಾಗಿತ್ತು.
ಇದಲ್ಲದೇ ಕೆಂಪೇಗೌಡ ಶಾಲೆಯು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಉತ್ತಮ ಸಾಧನೆಗಳಿಸಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವು ಚರ್ಚೆಗೆ ಗ್ರಾಸವಾಗಿದೆ. ರಂಗೇಗೌಡ ವಾಟ್ಸಪ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು, ಅಲ್ಲಿನ ಒಬ್ಬ ಶಿಕ್ಷಕ ಹಾಗೂ ಸ್ಥಳೀಯ ವರದಿಗಾರರೊಬ್ಬರಿಗೆ ತಿಳಿದಿತ್ತು.
ಆದರೆ ಗುಮಾಸ್ತ ರಂಗೇಗೌಡ ಈ ಇಬ್ಬರಿಗೂ ಹಣ ನೀಡಿ ಯಾರಿಗೂ ಹೇಳದಂತೆ ತಿಳಿಸಿದ್ದ. ಆದರೆ ಈ ಆರೋಪ ಪರೀಕ್ಷೆ ಮುಗಿದು ತಿಂಗಳು ಕಳೆದ ಬಳಿಕ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಗಡಿ ಇನ್ಸ್‌ಪೆಕ್ಟರ್ ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ರಂಗೇಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.