ರಾಜ್ಯದಲ್ಲಿ ಈ ಬಾರಿ SSLC ಪರೀಕ್ಷೆ ಹೇಗೆ ?

Prasthutha|

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ನಡೆಸದಿರಲು ನಿರ್ಧರಿಸಿರುವ ರಾಜ್ಯ ಸರಕಾರ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಸರಳೀಕರಿಸಿ ನಡೆಸುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ವಿಷಯಗಳನ್ನು ಒಂದು ಪ್ರಶ್ನೆ ಪತ್ರಿಕೆಯಾಗಿ ಪರೀಕ್ಷೆ ನಡೆಸುವುದಾಗಿ ಸಚಿವರು ತಿಳಿಸಿದ್ದಾರೆ.

- Advertisement -

ಗ್ರೇಡ್ ಅಂಕದಲ್ಲಿ ಪರೀಕ್ಷೆ ನಡೆಸಲು ತೀರ್ಮಾನಿಸಿರುವ ಶಿಕ್ಷಣ ಇಲಾಖೆ, ಜುಲೈ ಮೂರನೇ ವಾರದಿಂದ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಇನ್ನು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪ್ರಥಮ ಪಿಯು ಅಂಕ ಆಧರಿಸಿ ಗ್ರೇಡ್ ನೀಡಿ ಉತ್ತೀರ್ಣಗೊಳಿಸಲಾಗುವುದು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಎಸ್ಎಸ್ಎಲ್ಸಿ ಪರೀಕ್ಷೆಗೂ ಮುನ್ನವೇ ಮಾದರಿ ಪರೀಕ್ಷೆಯನ್ನು ಒದಗಿಸಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೊಳಗಾಗಬೇಕಿಲ್ಲ. ಕೊರೊನಾ ನಿಯಮಾವಳಿಗಳನ್ನು ಪಾಲಿಸಿಕೊಂಡು ಪರೀಕ್ಷೆ ನಡೆಸಲಾಗುತ್ತದೆ, ಹಾಗಾಗಿ ಪರೀಕ್ಷೆಗೆ ಹಾಜರಾಗುವ ಮುನ್ನ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗಳಿಗೂ ಕಡ್ಡಾಯ ಕೋವಿಡ್ ಲಸಿಕೆ ಹಾಕಿಸಲಾಗುವುದು ಎಂದರು.

- Advertisement -

ಇನ್ನು ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೆ ಎನ್ 95 ಮಾಸ್ಕ್ ವಿತರಿಸಲು ನಿರ್ಧರಿಸಿರುವ ಶಿಕ್ಷಣ ಇಲಾಖೆ, ಪರೀಕ್ಷಾ ಕೇಂದ್ರಗಳಲ್ಲೂ ಅಂತರ ಕಾಯ್ದು ಪರೀಕ್ಷೆ ನಡೆಸಲು ತೀರ್ಮಾನಿಸಿದೆ. ಒಂದು ವೇಳೆ ಪರೀಕ್ಷೆ ಸಮಯದಲ್ಲಿ ಕೊರೊನಾ ಸೋಂಕಿಗೆ ತುತ್ತಾದ ವಿದ್ಯಾರ್ಥಿಗಳಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಆನಂತರ ಪರೀಕ್ಷೆ ನಡೆಸಲು ವ್ಯವಸ್ಥೆ ಕಲ್ಪಿಸುವುದಾಗಿ ಸಚಿವರು ಹೇಳಿದ್ದಾರೆ.

ಅದಲ್ಲದೇ, ದ್ವಿತೀಯ ಪಿಯು ಪರೀಕ್ಷೆ ಬರೆಯದೇ ಗ್ರೇಡಿಂಗ್ ಆಧಾರದಲ್ಲಿ ಅಂಕ ಇಷ್ಟವಿಲ್ಲದೇ ಇದ್ದಲ್ಲಿ ಅಂತಹವರು ದ್ವಿತೀಯ ಪಿಯು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಕೊರೊನಾ ಪ್ರಕರಣ ಕಡಿಮೆಯಾದ ಬಳಿಕ ದ್ವಿತೀಯ ಪಿಯು ಪರೀಕ್ಷೆ ನಡೆಸುವುದಾಗಿ ತಿಳಿಸಿದ್ದಾರೆ.

ಇನ್ನು ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕವನ್ನು 20 ದಿನಗಳ ಮುಂಚಿತವಾಗಿ ತಿಳಿಸುವುದಾಗಿಯೂ ತಿಳಿಸಿದ್ದಾರೆ. ಪ್ರಮುಖವಾಗಿ, ಕೊರೊನಾ ಮೂರನೆ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ, ಆದ್ದರಿಂದ ಈ ಸಮಯದಲ್ಲಿ ಪರೀಕ್ಷೆ ನಡೆಸುವುದು ಎಷ್ಟು ಸೂಕ್ತ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಸಚಿವ ಸುರೇಶ್ ಕುಮಾರ್, “ಕೊರೊನಾ ಮೂರನೆ ಅಲೆ ಬಗ್ಗೆ ನಿರ್ದಿಷ್ಟತೆ ಇಲ್ಲ. ಅದು ಮಕ್ಕಳ ಮೇಲೆಯೇ ಪರಿಣಾಮ ಬೀರುತ್ತದೆ ಎನ್ನುವುದಕ್ಕೆ  ಯಾವುದೇ ಆಧಾರವಿಲ್ಲ ಎನ್ನುವುದನ್ನು ಈಗಾಗಲೇ ಹಲವು ತಜ್ಞರು ತಿಳಿಸಿದ್ದಾರೆ” ಎಂದರು.

Join Whatsapp