SSC ಪರೀಕ್ಷೆಯನ್ನು ತಕ್ಷಣ ರದ್ದುಪಡಿಸಬೇಕು, ಇಲ್ಲದಿದ್ದರೆ ತೀವ್ರ ಸ್ವರೂಪದ ಹೋರಾಟ: ನಾರಾಯಣಗೌಡ ಎಚ್ಚರಿಕೆ

Prasthutha|

ಬೆಂಗಳೂರು: ಒಕ್ಕೂಟ ಸರ್ಕಾರ ಈಗ ನಡೆಸುತ್ತಿರುವ ಪರೀಕ್ಷೆಗಳನ್ನು ಕೂಡಲೇ ರದ್ದುಮಾಡಬೇಕು. ಕನ್ನಡ ಸೇರಿದಂತೆ ಎಲ್ಲ ನುಡಿಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಹೊಸದಾಗಿ ಅಧಿಸೂಚನೆ ಹೊರಡಿಸಿ, ಹೊಸದಾಗಿ ಅರ್ಜಿ ಆಹ್ವಾನ ಮಾಡಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ.

- Advertisement -

ಸರಣಿ ಟ್ವೀಟ್ ಮಾಡಿರುವ ಅವರು, ರೈಲ್ವೆ ಪರೀಕ್ಷೆ, ಬ್ಯಾಂಕಿಂಗ್ ಪರೀಕ್ಷೆ, ಐಬಿಪಿಎಸ್ ಪರೀಕ್ಷೆ ಸೇರಿದಂತೆ ಎಲ್ಲ ಪರೀಕ್ಷೆಗಳಲ್ಲೂ ಕನ್ಕಡಿಗರಿಗೆ ಅನ್ಯಾಯವಾಗಿದೆ. SSC ಪರೀಕ್ಷೆಗಳಲ್ಲೂ ಕನ್ನಡದಲ್ಲಿ ಪರೀಕ್ಷೆ ಇಲ್ಲದೆ ಗ್ರಾಮೀಣ ಭಾಗದ, ದುರ್ಬಲ ವರ್ಗಗಳ ಮಕ್ಕಳು ಪರೀಕ್ಷೆ ಎದುರಿಸದಂತೆ ಮಾಡಿರುವ ಹಿಂದಿನ ಕುತಂತ್ರವಾದರೂ ಏನು? ಯಾಕೆ ಈ ಮಲತಾಯಿ ಧೋರಣೆ? ಎಂದು ಪ್ರಶ್ನಿಸಿದ್ದಾರೆ.

20,000 ಬಿ ಮತ್ತು ಸಿ ದರ್ಜೆಯ ಹುದ್ದೆಗಳಿಗೆ SSC ಪರೀಕ್ಷೆ ನಡೆಸುತ್ತಿದೆ. ಕರ್ನಾಟಕದಲ್ಲಿ ನಡೆಯುವ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಿ, ಕನ್ನಡಿಗರಿಗೆ ಉದ್ಯೋಗ ನೀಡಲು ಏನು ಸಮಸ್ಯೆ? ಬೇರೆ ರಾಜ್ಯದವರನ್ನು ಅದರಲ್ಲೂ ವಿಶೇಷವಾಗಿ ಹಿಂದಿ ರಾಜ್ಯದವರನ್ನು ಕರ್ನಾಟಕದಲ್ಲಿ ತುರುಕುವ ಪ್ರಯತ್ನ ಇದಲ್ಲವೇ? ಎಂದು ಕೇಳಿದ್ದಾರೆ.

- Advertisement -

ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಪರೀಕ್ಷೆ ನಡೆಸಿದರೆ ಕನ್ನಡ ಮಾಧ್ಯಮದಲ್ಲಿ ಕಲಿತವರು ಏನು ಮಾಡಬೇಕು? ಅವರು ಹೇಗೆ ಪರೀಕ್ಷೆ ಬರೆಯಬೇಕು? ಹಿಂದಿ ತಾಯ್ನುಡಿ ಹೊಂದಿದವರಿಗೆ ಇರುವ ಅವಕಾಶ ಕನ್ನಡಿಗರಿಗೇಕೆ ಇಲ್ಲ? ಯಾಕಿಂಥ ತಾರತಮ್ಯ? ಭಾರತ ಒಕ್ಕೂಟದಲ್ಲಿ ಕನ್ನಡಿಗರು ಇಲ್ಲವೇ? ನಾವು ಮಾಡಿದ ತಪ್ಪಾದರೂ ಏನು? #SSCDroha ಎಂದು ನಾರಾಯಣ ಗೌಡ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.



Join Whatsapp