ಮಂಗಳೂರು: ದ.ಕ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಂಬಾತನಿಗೆ ಜಿಲ್ಲಾ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ಜಿ. ಆದೇಶಿಸಿದ್ದಾರೆ.
ಪ್ರಸಕ್ತ ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಯನ್ನು ಪರಿಗಣಿಸಿ ಮುಂಜಾಗ್ರತಾ ಕ್ರಮವಾಗಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆಯಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮೋದ್ ಮುತಾಲಿಕ್’ಗೆ ದ.ಕ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಜುಲೈ 28 ರಿಂದ ಮುಂದಿನ ಆದೇಶದವರೆಗೆ ನಿಷೇಧ ಚಾಲ್ತಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಮಧ್ಯೆ ಪ್ರವೀನ್ ಎಂಬಾತನ ಹತ್ಯೆಯು ಕೋಮು ದ್ವೇಷದಿಂದ ಮುಸ್ಲಿಮರು ನಡೆಸಿರುವುದಾಗಿ ಬಿಂಬಿಸಲಾಗುತ್ತಿದ್ದು, ಶವ ಯಾತ್ರೆಯಲ್ಲಿ ವ್ಯಾಪಕ ಹಿಂಸಾಚಾರ ಏರ್ಪಟ್ಟು ಸಾರ್ವಜನಿಕ ಆಸ್ತಿಪಾಸ್ತಿ, ಕಾನೂನು ಸುವ್ಯವಸ್ಥೆಗೆ ಸಮಸ್ಯೆಯಾಗಿರುತ್ತದೆ. ಮೃತ ಪ್ರವೀಣ್ ಅವರ ಮನೆ ಮತ್ತು ಇತರೆ ಕಡೆಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂಬ ಮಾಹಿತಿ ದೊರೆತಿದೆ. ಈ ಹಿಂದೆಯೂ ಮುತಾಲಿಕ್ ಅವರು ಭೇಟಿ ನೀಡಿದ ಸ್ಥಳದಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿದ ಬಳಿಕ ಕೋಮುಗಲಭೆ ಉಂಟಾಗಿತ್ತು. ಈ ನಿಟ್ಟಿನಲ್ಲಿ ಜಿಲ್ಲಾಡಳಿಯ ಅವರಿಗೆ ಜಿಲ್ಲಾ ಪ್ರವೇಶಕ್ಕೆ ನಿಷೇಧ ಹೇರಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸದ್ಯ ದ.ಕ ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ಸಲುವಾಗಿ ಜಿಲ್ಲಾಡಳಿತ ಈಗಾಗಲೇ ಸೆಕ್ಷನ್ 144 ಹೇರಿದೆ.