ಸ್ವಪಕ್ಷೀಯರ ವಿರುದ್ಧವೇ ಕಿಡಿಗಾರಿದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್

Prasthutha|

ಮೈಸೂರು : “ಪಕ್ಷಕ್ಕಾಗಿ ದುಡಿಯೋದು ಯಾರೋ? ಸ್ವಾರ್ಥಕ್ಕೆ ಮಾಡಿಕೊಳ್ಳೋದು ಇನ್ಯಾರೋ? ತಮ್ಮ ಮನೆ ಬೆಳೆಸಿಕೊಳ್ಳೋದೇ ಆಯ್ತು. ತಮ್ಮ ಅವಧಿ ಮುಗಿಯಿತು ಎಂದು ತಪ್ಪು ಮಾಡಬಾರದು” ಎಂದು ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಸ್ವಪಕ್ಷೀಯರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಮೈಸೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.

- Advertisement -

“ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವುದಿಲ್ಲ. ನಮಗೆ ತೃಪ್ತಿ ಇರಬಹುದು. ಆದರೆ, ಜನರಲ್ಲಿ ಅತೃಪ್ತಿ ಇದೆ. ಅವರಲ್ಲಿ ಹತಾಶೆ, ನಿರಾಸೆ ಮೂಡಿದೆ. ಇದು ನನ್ನ ಅನುಭವಕ್ಕೂ ಬರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಇದು ಜನರಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಲು ಕಾರಣವಾಗುತ್ತಿದೆ ಎಂಬ ವಿವೇಚನೆ ನಮ್ಮ ರಾಜ್ಯದ ಯಾವೊಬ್ಬ ನಾಯಕರಿಗೂ ಇಲ್ಲವಾಗಿದೆ. ಪಕ್ಷದ ಹಿತಕ್ಕಿಂತ ಸ್ವಾರ್ಥವೇ ಮುಖ್ಯವಾಗಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆಗೆ ಇನ್ನೂ ಸಮಯವಿದೆ ಎಂದುಕೊಂಡು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ, ಕಣ್ಮುಚ್ಚಿ ಕುಳಿತಿದ್ದರೆ ಅಧಿಕಾರದ ಅಮಲನ್ನು ತಲೆಗೇರಿಸಿಕೊಂಡರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.

- Advertisement -

“ನಾನೊಬ್ಬ ಬಿಜೆಪಿಯ ಸಕ್ರಿಯ ಕಾರ್ಯಕರ್ಯ. ಕಾಂಗ್ರೆಸ್ ನಲ್ಲಿದ್ದಾಗ ಕೆಪಿಸಿಸಿ ಅಧ್ಯಕ್ಷನಾಗಲಿಲ್ಲ ಎಂಬುದೊಂದನ್ನು ಹೊರತುಪಡಿಸಿದರೆ, ಇನ್ನುಳಿದ ಎಲ್ಲಾ ಜವಾಬ್ದಾರಿ ನಿಭಾಯಿಸಿ ಪಕ್ಷ ಸಂಘಟಿಸಿದವನು. ಇದುವರೆಗೆ, ನನ್ನನ್ನು ಒಂದೇ ಒಂದು ರಾಜ್ಯ ಕಾರ್ಯಕಾರಿಣಿಗೆ ಆಹ್ವಾನಿಸಿದ್ದೀರಾ? ನನ್ನ ಸಲಹೆ ಪಡೆದಿದ್ದೀರಾ? ಎಂದು ವೇದಿಕೆಯಲ್ಲಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರನ್ನು ಪ್ರಶ್ನಿಸಿದರು.

ಈಗಾಗಲೇ ಎಲ್ಲಾ ಅಧಿಕಾರ ಅನುಭವಿಸಿರುವೆ. ನನಗೆ ಇನ್ನು ವಿಶ್ರಾಂತಿಯ ಕಾಲ. ಗೌರವದಿಂದ ನಿವೃತ್ತನಾಗುತ್ತೇನೆ. ಮೈಸೂರಿನಲ್ಲಿ ನಿಮಗೆ ಗೆಲ್ಲುವ ವಿಶ್ವಾಸವಿದೆಯೇನ್ರೀ? ಸಂಘಟನೆ ಎಲ್ಲಿದೆ? ಎಂದು ರವಿಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕಾರ್ಯಕಾರಿಣಿಯಲ್ಲಿ ಹಾಜರಿದ್ದ ಪದಾಧಿಕಾರಿಗಳು ಸಂಸದರ ಮಾತಿಗೆ ಚಪ್ಪಾಳೆ ತಟ್ಟಿದರು.



Join Whatsapp