ಆಝಾನ್ ವಿರುದ್ಧ ಶ್ರೀರಾಮ ಸೇನೆ ಅಭಿಯಾನಕ್ಕೆ ದೇವಸ್ಥಾನಗಳಿಂದಲೇ ವಿರೋಧ !

Prasthutha|

►► ಕಾರ್ಯಕರ್ತರನ್ನು ದೇವಸ್ಥಾನದ ಹತ್ತಿರಕ್ಕೂ ಬಿಡಬೇಡಿ ಎಂದ ದೇವಸ್ಥಾನ ಆಡಳಿತ ಮಂಡಳಿ

- Advertisement -


ಬೆಂಗಳೂರು: ಮಸೀದಿಗಳ ಆಝಾನ್ ವಿರುದ್ಧ ಶ್ರೀರಾಮ ಸೇನೆ ಹಮ್ಮಿಕೊಂಡಿದ್ದ ಹನುಮಾನ್ ಚಾಲೀಸಾ ಅಭಿಯಾನಕ್ಕೆ ಸ್ವತಃ ದೇವಸ್ಥಾನಗಳ ಆಡಳಿತ ಮಂಡಳಿಯವರು ಹಾಗೂ ಸಾಮಾನ್ಯ ಹಿಂದೂಗಳು ಕೂಡ ವಿರೋಧ ವ್ಯಕ್ತಪಡಿಸಿದ್ದರಿಂದ ಅಭಿಯಾನ ವಿಫಲಗೊಂಡಿರುವುದು ಸಾಬೀತಾಗಿದೆ.


ಬೆಂಗಳೂರಿನ ನೀಲಸಂದ್ರ ಆಂಜನೇಯ ದೇವಸ್ಥಾನ ಮಂಡಳಿಯವರು ಕೂಡ ಶ್ರೀರಾಮ ಸೇನೆಯ ಅಭಿಯಾನಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ನಮ್ಮ ದೇವಸ್ಥಾನದ ಮುಂದೆ ಈ ರೀತಿಯ ನಾಟಕ ನಡೆಸಬಾರದು. ಇದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ. ಶ್ರೀರಾಮ ಸೇನೆಯ ಕಾರ್ಯಕರ್ತರಿಗೆ ಇಲ್ಲಿಗೆ ಬರಲು ಅವಕಾಶವೇ ನೀಡಬಾರದು ಎಂದು ಪೊಲೀಸ್ ಇಲಾಖೆಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.

- Advertisement -


ಸೋಮವಾರ ರಾಜ್ಯಾದ್ಯಂತ ಶ್ರೀರಾಮ ಸೇನೆ ಹಮ್ಮಿಕೊಂಡಿದ್ದ ಹನುಮಾನ್ ಚಾಲೀಸ್ ಅಭಿಯಾನ ಕೈಗೊಳ್ಳಲು ಕಾರ್ಯಕರ್ತರು ನೀಲಸಂದ್ರ ಆಂಜನೇಯ ದೇವಸ್ಥಾನಕ್ಕೆ ಆಗಮಿಸಿದ್ದರು. ಆದರೆ ಮಾರ್ಗ ಮಧ್ಯೆಯೇ ಪೊಲೀಸರು ಅವರನ್ನು ತಡೆದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ನಾವು ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದು ಹಿಂದಿರುತ್ತೇವೆ ಎಂದು ಕಾರ್ಯಕರ್ತರು ಮನವಿ ಮಾಡಿದಾಗ, ಯಾವುದೇ ಕಾರಣಕ್ಕೂ ನಿಮ್ಮನ್ನು ದೇವಸ್ಥಾನದ ಆವರಣಕ್ಕೆ ಬರದಂತೆ ಆಡಳಿತ ಮಂಡಳಿಯವರೇ ಸೂಚಿಸಿದ್ದಾರೆ. ಸುಮ್ಮನೆ ಸಂಘರ್ಷಕ್ಕೆ ಅವಕಾಶ ಕಲ್ಪಿಸಬೇಡಿ, ದಯವಿಟ್ಟು ಇಲ್ಲಿಂದ ಹೊರಡಿ ಎಂದು ಪೊಲೀಸ್ ಅಧಿಕಾರಿ ಮನವಿ ಮಾಡಿದರು.


ಈ ವೇಳೆ, ಆಡಳಿತ ಮಂಡಳಿ ಈ ರೀತಿ ಬರೆದ ಪತ್ರ ಬರೆದಿದ್ದರೆ ತೋರಿಸಿ ಎಂದು ಕಾರ್ಯಕರ್ತರು ಒತ್ತಾಯಿಸಿದಾಗ, ಪೊಲೀಸ್ ಅಧಿಕಾರಿ ಪತ್ರವನ್ನು ತೋರಿಸಿದರು. ಬಳಿಕ ಕಾರ್ಯಕರ್ತರು ಹಠ ಮುಂದುವರಿಸಿದಾಗ ಅವರನ್ನು ವಶಕ್ಕೆ ಪಡೆದು ಟೆಂಪೋ ಟ್ರಾವೆಲ್ ನಲ್ಲಿ ಬೇರೆಡೆಗೆ ಕರೆದೊಯ್ಯಲಾಯಿತು. ನೀಲಸಂದ್ರ ಆಂಜನೇಯ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಕೈಗೊಂಡ ದಿಟ್ಟ ನಿರ್ಧಾರಕ್ಕೆ ಸ್ಥಳೀಯ ಹಿಂದೂಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನಮ್ಮ ಪ್ರದೇಶಕ್ಕೆ ಬಂದು ಸಂಘರ್ಷ ಸೃಷ್ಟಿಸಲು ಅವಕಾಶ ನೀಡುವುದಿಲ್ಲ, ನಿಮ್ಮ ರಾಜಕೀಯಕ್ಕೆ ನಮ್ಮ ದೇವಸ್ಥಾನ ಬಳಸಬೇಡಿ ಎಂಬ ಸ್ಪಷ್ಟ ಸಂದೇಶವನ್ನು ಆಡಳಿತ ಮಂಡಳಿ ನೀಡಿದೆ.



Join Whatsapp