ಕೊಲಂಬೊ: ಶ್ರೀಲಂಕಾದಲ್ಲಿ ಉಂಟಾಗಿರುವ ತೀವ್ರ ಬಿಕ್ಕಟ್ಟಿನಿಂದಾಗಿ ಜನಾಕ್ರೋಶ ಭುಗಿಲೆದ್ದಿದ್ದು, ಜನಾಕ್ರೋಶದ ಮಧ್ಯೆ ಹಾಲಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ದೇಶ ಬಿಟ್ಟು ಮಿಲಿಟರಿ ವಿಮಾನದಲ್ಲಿ ಮಾಲ್ಡೀವ್ಸ್’ಗೆ ಪಲಾಯನ ಮಾಡಿದ ಬಳಿಕ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಅಧ್ಯಕ್ಷ ರಾಜಪಕ್ಸೆ ಅವರು ವಿದೇಶ ಪ್ರವಾಸದಲ್ಲಿರುವಾಗ ತನ್ನ ಕೆಲಸಕಾರ್ಯಗಳನ್ನು ಮಾಡಲು ಪ್ರಧಾನಿ ವಿಕ್ರಮಸಿಂಘೆ ಅವರನ್ನು ನೇಮಿಸಿರುವುದಾಗಿ ಸಂಸತ್ತಿನ ಸ್ಪೀಕರ್ ಮಹಿಂದಾ ಯಾಪಾ ಅಬೇವರ್ಧನ ಘೋಷಿಸಿದ್ದಾರೆ. ಅಲ್ಲದೆ ಇಂತಹ ಅಧಿಕಾರ ಸಂವಿಧಾನದ 37(1)ನೇ ಪರಿಚ್ಛೇದದ ಅಡಿಯಲ್ಲಿ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ ಪ್ರಧಾನಿ ಕಚೇರಿಗೆ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಘೇರಾವ್ ಹಾಕಿದ್ದಾರೆ. ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗುವುದೆಂದು ಪ್ರಧಾನಿ ಕಚೇರಿ ಈ ಹಿಂದೆ ತಿಳಿಸಿತ್ತು. ಈ ವೇಳೆ ಕರ್ಫ್ಯೂ ಜಾರಿಯಲ್ಲಿದ್ದು, ಗಲಭೆಯಲ್ಲಿ ತೊಡಗಿರುವವರನ್ನು ಬಂಧಿಸುವಂತೆ ಪ್ರಧಾನಿಯು ಭದ್ರತಾ ಪಡೆಗಳಿಗೆ ಆದೇಶ ನೀಡಿದ್ದಾರೆ.