ಅಧ್ಯಾತ್ಮ ಮಠೋದ್ಯಮ ಮತ್ತು ಅಧಿಕಾರ ರಾಜಕಾರಣ

Prasthutha|

ಬಂಡವಾಳ ಹೂಡಿಕೆ, ಬಂಡವಾಳ ಕ್ರೋಢೀಕರಣ ಮತ್ತು ಲಾಭಗಳಿಕೆಯ ಮೂಲಕ ಬಂಡವಾಳದ ಅಭಿವದ್ಧಿ, ಈ ತ್ರಿಸೂತ್ರಗಳ ಸುತ್ತ ಮಾರುಕಟ್ಟೆ ಸಂಸ್ಕೃತಿಯೂ ರೂಪುಗೊಳ್ಳುತ್ತದೆ. ಬಂಡವಾಳದ ಈ ಸ್ವರೂಪವನ್ನು ಯಥಾಸ್ಥಿತಿಯಲ್ಲಿರಿಸಲು ಮತ್ತು ಇನ್ನೂ ಹೆಚ್ಚು ವಿಸ್ತೃತಗೊಳಿಸಲು ಅಥವಾ ಈ ವ್ಯವಸ್ಥೆಯ ಬೇರುಗಳನ್ನು ಮತ್ತಷ್ಟು ಆಳಕ್ಕೆ ಇಳಿಸಿ ಸುಭ್ರತೆಯನ್ನು ಕಂಡುಕೊಳ್ಳಲು ಸಮಾಜದಲ್ಲಿ ಗ್ರಾಹಕ ಸಂಸ್ಕೃತಿಯನ್ನು ಪೋಷಿಸಲಾಗುತ್ತದೆ. ಷಾಪಿಂಗ್ ಮಾಲ್ ಗಳಲ್ಲಿ ಕಂಡದ್ದನ್ನೆಲ್ಲಾ ಖರೀದಿಸುವ ಮನಸ್ಥಿತಿಯನ್ನು ಪ್ರಚೋದಿಸುವಂತೆಯೇ ದೇವಾಲಯಗಳಲ್ಲಿ, ಅಧ್ಯಾತ್ಮ ಕೇಂದ್ರಗಳಲ್ಲಿ ಮತ್ತು ಮಠಮಾನ್ಯಗಳಲ್ಲಿ ಜನರನ್ನು ಆಚರಣೆಗಳತ್ತ ಆಕರ್ಷಿಸಲಾಗುತ್ತದೆ. ಗ್ರಾಹಕ ಸಂಸ್ಕೃತಿಯ ಸಾಂಸ್ಕೃತಿಕ ಸ್ವರೂಪವನ್ನು ಇಲ್ಲಿ ಕಾಣಬಹುದು.

- Advertisement -

 ಇಂದು ನಮ್ಮ ಸುತ್ತಲಿನ ದೇವಾಲಯಗಳು, ಇಗರ್ಜಿಗಳು, ಮಸೀದಿಗಳು, ವಿಭಿನ್ನ ಸ್ವರೂಪದ ಮಠಗಳು ಮತ್ತು ಆಶ್ರಮಗಳು ಸ್ಥಾವರ ರೂಪದಲ್ಲಿ ಈ ಬಂಡವಾಳ ಮಾರುಕಟ್ಟೆಗೆ ಪೂರಕವಾಗಿಯೇ ಇರುತ್ತವೆ. ದೇವರು, ದೈವತ್ವ, ದೈವೀಕ ನಂಬಿಕೆ ಇತ್ಯಾದಿಗಳು ಈ ಮಾರುಕಟ್ಟೆಯ ಕಚ್ಚಾವಸ್ತುಗಳಂತೆ ಬಿಕರಿಯಾಗುತ್ತವೆ. ಜನಸಾಮಾನ್ಯರ ಖರೀದಿ ಸಾಮರ್ಥ್ಯಕ್ಕೆ ಪೂರಕವಾಗಿ ಧಾರ್ಮಿಕ ವಿಧಿ ವಿಧಾನಗಳನ್ನು, ಆಚರಣೆಗಳನ್ನು ರೂಪಿಸಲಾಗುತ್ತದೆ. ಮತ್ತೊಂದೆಡೆ ಭಕ್ತಾದಿಗಳನ್ನು ಆಕರ್ಷಿಸಲು ಅಗತ್ಯವಾದ ಹತಾಶೆ, ಆತಂಕ, ಭೀತಿ ಮತ್ತು ಮಹದಾಸೆಗಳನ್ನೂ ಮಾರುಕಟ್ಟೆ ತಂತ್ರಗಾರಿಕೆಯನ್ನೇ ಬಳಸಲಾಗುತ್ತದೆ. ಜಾಹೀರಾತು ಒಂದು ಮಾಧ್ಯಮವಾದರೆ, ವಿದ್ಯುನ್ಮಾನ ಮಾಧ್ಯಮಗಳ ನೇರ ಪ್ರಸಾರದ ಕಾರ್ಯಕ್ರಮಗಳು ಮತ್ತೊಂದು ವಿಧಾನ.

 ಈ ಪ್ರಕ್ರಿಯೆಯಲ್ಲೇ ಸಮಾಜದಲ್ಲಿ ಮಡುಗಟ್ಟಿರುವ ಆತಂಕ ಹತಾಶೆಗಳು ಧಾರ್ಮಿಕ ಕೇಂದ್ರಗಳ, ಆಧ್ಯಾತ್ಮಿಕ ಕೇಂದ್ರಗಳ ಬುನಾದಿಯಾಗಿ ಪರಿಣಮಿಸುತ್ತವೆ. ಶ್ರದ್ಧೆ ಮತ್ತು ನಂಬಿಕೆ ಕಚ್ಚಾವಸ್ತುಗಳಾಗಿ ಭಕ್ತಿ ಮತ್ತು ಉನ್ಮಾದವನ್ನು ಉತ್ಪಾದಿಸಲಾಗುತ್ತದೆ. ಈ ಉತ್ಪಾದಿತ ಸರಕುಗಳನ್ನು ಬಿಕರಿ ಮಾಡಲು ಮತ್ತು ಮರು ಉತ್ಪಾದನೆಗೆ ಅವಶ್ಯವಾದ ಬಂಡವಾಳವನ್ನು ಕ್ರೋಢೀಕರಿಸುವ ಕೇಂದ್ರಗಳಾಗಿ ನಮ್ಮ ಸುತ್ತಲಿನ ಪೂಜಾ ಸ್ಥಳಗಳನ್ನು ನೋಡುತ್ತಿದ್ದೇವೆ. ಸುತ್ತಲಿನ ಸಮಾಜದ ಆರ್ಥಿಕ ಬೆಳವಣಿಗೆ, ಜನಸಾಮಾನ್ಯರ ಆರ್ಥಿಕ ಮೇಲ್ ಚಲನೆ ಮತ್ತು ಸಾಮಾಜಿಕ ಉನ್ನತಿ ಈ ಮಾರುಕಟ್ಟೆಯ ವದ್ಧಿಗೆ ನೆರವಾಗುವ ಪ್ರಮುಖ ಅಂಶಗಳು. ಪೂಜಾಸ್ಥಳಗಳಲ್ಲಿ ಮತ್ತು ಯೋಗ-ಧ್ಯಾನ ಕೇಂದ್ರಗಳಲ್ಲಿ ಸಾರ್ವಜನಿಕರ ಅವಗಾಹನೆಗಾಗಿ ನೇತುಹಾಕಿರುವ ದರಪಟ್ಟಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ.

- Advertisement -

ಹಾಗಾಗಿಯೇ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಮತಧರ್ಮಗಳು ಧಾರ್ಮಿಕ ಪೂಜಾಸ್ಥಳಗಳ ಮೂಲಕ, ಧ್ಯಾನ ಕೇಂದ್ರಗಳ ಮೂಲಕ ಮತ್ತು ಅಧ್ಯಾತ್ಮ ಕೇಂದ್ರಗಳ ಮೂಲಕ ತಮ್ಮ ಸ್ಥಾಪಿತ ನೆಲೆಯನ್ನು ಭದ್ರಪಡಿಸಿಕೊಳ್ಳುತ್ತವೆ. ಜಾತಿ ಮತ್ತು ಸಮುದಾಯ ಆಧಾರಿತ ಮಠಗಳು, ಮತಧರ್ಮ ಆಧಾರಿತ ಪೂಜಾಸ್ಥಳಗಳು ಅಧಿಕಾರ ರಾಜಕಾರಣವನ್ನು ಆಶ್ರಯಿಸುತ್ತಲೇ ಬೆಳೆಯುವ ಮೂಲಕ ರಾಜಕೀಯ ಅಧಿಕಾರದ ಮೇಲೆ ಹಿಡಿತವನ್ನೂ ಸಾಧಿಸುವುದನ್ನು ಕರ್ನಾಟಕದ ರಾಜಕಾರಣದಲ್ಲಿ ನೋಡುತ್ತಿದ್ದೇವೆ. ಇಂದು ನಡೆಯುತ್ತಿರುವ ಲಿಂಗಾಯತ ಮಠಗಳ ನೇರ ರಾಜಕಾರಣವನ್ನೂ ಈ ದಷ್ಟಿಯಿಂದಲೇ ನೋಡಬೇಕಾಗುತ್ತದೆ. ಭಾರತದ ಸೆಕ್ಯುಲರ್ ರಾಜಕಾರಣದ ದೌರ್ಬಲ್ಯವೂ ಇಲ್ಲೇ ಅಡಗಿದೆ. ಸರ್ವಧರ್ಮ ಸಮಭಾವ ಅಥವಾ ಮತಧರ್ಮ ನಿರಪೇಕ್ಷತೆ ಎನ್ನುವ ಪರಿಕಲ್ಪನೆಯಲ್ಲಿ ಮತಧರ್ಮಗಳು ಅಧಿಕಾರ ಕೇಂದ್ರಗಳಿಗೆ ಸಮೀಪವಾಗುತ್ತಿರುವುದನ್ನು ತಡೆಗಟ್ಟಲಾರದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಏಕೆಂದರೆ ಮತಧರ್ಮಗಳನ್ನು ರಾಜಕೀಯದಿಂದ ಪ್ರತ್ಯೇಕಿಸುವ ನಿಟ್ಟಿನಲ್ಲಿ, ಎಡ ಪಕ್ಷಗಳನ್ನು ಹೊರತುಪಡಿಸಿ, ಮುಖ್ಯವಾಹಿನಿಯ ಯಾವ ರಾಜಕೀಯ ಪಕ್ಷಗಳೂ ವಸ್ತುನಿಷ್ಠವಾದ ನಿಲುವು ಹೊಂದಿಲ್ಲ.

  ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣ ಜಾತ್ಯತೀತತೆಯ ಈ ದೌರ್ಬಲ್ಯವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಲೇ, ಮತಧಾರ್ಮಿಕ ಕೇಂದ್ರಗಳನ್ನು ಅಧಿಕಾರ ಕೇಂದ್ರಗಳ ಸಮೀಪಕ್ಕೆ ತಂದಿರುವುದನ್ನು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಪ್ರಯೋಗ ನಿರೂಪಿಸಿದೆ. ಇಂದಿನ ಭಾರತದಲ್ಲಿ ಯಾವೊಂದು ಧಾರ್ಮಿಕ-ಆಧ್ಯಾತ್ಮಿಕ ಕೇಂದ್ರವೂ ಸರ್ವಸಂಗ ಪರಿತ್ಯಾಗಿ ಸಂತರನ್ನು ಪ್ರತಿನಿಧಿಸುತ್ತಿಲ್ಲ ಎನ್ನುವುದು ವಾಸ್ತವ. ಅಧಿಕಾರ ರಾಜಕಾರಣಕ್ಕೆ ಸಮೀಪವಾದಷ್ಟೂ ಮತಧಾರ್ಮಿಕ ಕೇಂದ್ರಗಳ ಸಾಮಾಜಿಕ ಸ್ಥಾನಮಾನಗಳು ಮತ್ತು ಸಾಮುದಾಯಿಕ ಪ್ರಾಬಲ್ಯ ಹೆಚ್ಚಾಗುತ್ತಲೇ ಹೋಗುತ್ತಿರುವುದನ್ನು ಸಹ ಗಮನಿಸಿದ್ದೇವೆ. ಖಾವಿ ಭಾರತದ ರಾಜಕಾರಣದ ನೂತನ ಸಮವಸ್ತ್ರವಾಗಿ ರೂಪುಗೊಂಡಿದೆಯಷ್ಟೆ.

ಭಾರತದ ಶ್ರೇಣೀಕತ ಸಮಾಜದಲ್ಲಿ ಜಾತಿ ಪ್ರಜ್ಞೆ ಗಟ್ಟಿಯಾಗುತ್ತಿರುವಂತೆಲ್ಲಾ, ಜಾತಿ-ಸಮುದಾಯವನ್ನು ಪ್ರತಿನಿಧಿಸುವ ಮತಧಾರ್ಮಿಕ-ಆಧ್ಯಾತ್ಮಿಕ ಸಂಸ್ಥೆಗಳು ಹೆಚ್ಚಾಗುತ್ತಿರುವುದನ್ನು ಈ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸಬೇಕಿದೆ. ತಾವು ಪ್ರತಿನಿಧಿಸುವ ಜಾತಿ-ಸಮುದಾಯಗಳ ಸರ್ವತೋಮುಖ ಅಭಿವದ್ಧಿಗಿಂತಲೂ, ಈ ಜನತೆಯನ್ನು ರಾಜಕೀಯ ಅಧಿಕಾರದ ಮೂಲಕ ಪ್ರತಿನಿಧಿಸುವ ಹಪಹಪಿ, ಹಂಬಲ ಮತ್ತು ಮಹತ್ವಾಕಾಂಕ್ಷೆ ಎಲ್ಲ ಜಾತಿಯ ಮಠಗಳಲ್ಲೂ ಕಾಣಬಹುದು. ಹಾಗಾಗಿಯೇ ಮಠಾಧೀಶರು, ಜಗದ್ಗುರುಗಳು, ಬಹುಶ್ರೀಗಳು ಬಹುಮಟ್ಟಿಗೆ ಔದ್ಯಮಿಕ ನೆಲೆಗಳ ಅಧಿಪತಿಗಳಾಗುತ್ತಿದ್ದಾರೆ. ಪೂಜಾಸ್ಥಳಗಳು ಮತ್ತು ಮಠಮಾನ್ಯಗಳು ಲಾಭಗಳಿಕೆಯ, ಬಂಡವಾಳ ಕ್ರೋಢೀಕರಣದ ಪ್ರಭಾವಿ ಕೇಂದ್ರಗಳಾಗಿ ಪರಿಣಮಿಸುತ್ತಿವೆ.

 ಜಾತಿ ವ್ಯವಸ್ಥೆಯ ವೈದಿಕ ಮೌಲ್ಯಗಳನ್ನು ಬದಿಗಿಟ್ಟು, ಎಲ್ಲ ಸಮುದಾಯಗಳಿಗೂ ಸಲ್ಲುವಂತಹ ಆಧ್ಯಾತ್ಮಿಕ ಕೇಂದ್ರಗಳಿಗೂ, ನಿರ್ದಿಷ್ಟ ಜಾತಿ ಸಮುದಾಯಗಳನ್ನು ಪ್ರತಿನಿಧಿಸುವ ಮಠಮಾನ್ಯಗಳಿಗೂ ಇರುವ ವ್ಯತ್ಯಾಸವಾದರೂ ಏನು? ಪ್ರಾತಿನಿಧ್ಯವಷ್ಟೇ ಅಲ್ಲವೇ? ಮೂಲತಃ ಈ ಕೇಂದ್ರಗಳು ಸಮಾಜದ ನೊಂದ, ಶೋಷಿತ, ಅವಕಾಶವಂಚಿತ ಮತ್ತು ಹತಾಶ ಜನಸಮುದಾಯಗಳ ಸಾಂತ್ವನ ಕೇಂದ್ರಗಳಾಗಿಯೇ ಕಾಣುತ್ತವೆ. ಬೇರುಬಿಟ್ಟಿರುವ ಸಾಮಾಜಿಕ ಮತ್ತು ಆರ್ಥಿಕ ತಾರತಮ್ಯಗಳನ್ನು ಯಥಾಸ್ಥಿತಿಯಲ್ಲಿರಿಸಿಕೊಂಡೇ, ಈ ತಾರತಮ್ಯಗಳನ್ನು ಪೋಷಿಸುವ ಸಮಾಜೋ ಆರ್ಥಿಕ ವ್ಯವಸ್ಥೆಯನ್ನು ಸಂರಕ್ಷಿಸಿಕೊಂಡೇ, ಜನಸಮುದಾಯಗಳನ್ನು ಸಾಂತ್ವನದ ನೆಲೆಯಲ್ಲಿ ಸಮಾಧಾನಪಡಿಸಿ, ಹೋರಾಟಗಳಿಂದ ವಿಮುಖರಾಗುವಂತೆ ಮಾಡುವ ರಾಜಕೀಯ ಉದ್ದೇಶಗಳನ್ನು ಎಲ್ಲ ಮತಧಾರ್ಮಿಕ-ಆಧ್ಯಾತ್ಮಿಕ ಕೇಂದ್ರಗಳಲ್ಲೂ ಗುರುತಿಸಬಹುದು.

ಈ ಹಿನ್ನೆಲೆಯಲ್ಲಿ, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜ್ಯೋತಿಷ್ಯ, ವಾಸ್ತು, ಭವಿಷ್ಯವಾಣಿ, ಅಮೃತವಾಣಿ ಮತ್ತು ವಿವಿಧ ಪೂಜೆ-ಯಜ್ಞಗಳ ಜಾಹೀರಾತುಗಳನ್ನು ಮಾರುಕಟ್ಟೆಯ ಗ್ರಾಹಕ ಸಂಸ್ಕೃತಿಯ ಒಂದು ಭಾಗವಾಗಿಯೇ ನೋಡಬೇಕಾಗುತ್ತದೆ. ವೈಚಾರಿಕತೆಯ ಸಂಯಮವನ್ನೂ ಮೀರಿ ಮುದ್ರಣ ಮಾಧ್ಯಮಗಳಲ್ಲಿ ನಿರ್ದಿಷ್ಟ ಧಾರ್ಮಿಕ ಕೇಂದ್ರಗಳ ಮತ್ತು ಮಠಗಳ ಜಾಹೀರಾತುಗಳು ಮೂರ್ನಾಲ್ಕು ಪುಟಗಳಲ್ಲಿ ಹರಡಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಶೈಕ್ಷಣಿಕ ಸೇವೆ, ಆರೋಗ್ಯ ಸೇವೆ, ಅನಾಥಾಶ್ರಮ, ವದ್ಧಾಶ್ರಮ ಮತ್ತು ಸಮುದಾಯ ಅಭಿವದ್ಧಿಯ ಕೈಂಕರ್ಯಗಳ ಹೆಸರಿನಲ್ಲಿ ಮತಧಾರ್ಮಿಕ-ಆಧ್ಯಾತ್ಮಿಕ ಕೇಂದ್ರಗಳು ತಮ್ಮ ಪುಟ್ಟ ಸಾಮ್ರಾಜ್ಯಗಳನ್ನೇ ನಿರ್ಮಿಸುತ್ತಿರುವುದನ್ನೂ ಗಮನಿಸಬೇಕಿದೆ. ಈ ಔದ್ಯಮಿಕ ಉನ್ನತಿಗೆ ಮಾರುಕಟ್ಟೆಯ ಜಾಹೀರಾತು ತಂತ್ರಗಳು ಪೂರಕವಾಗಿರುತ್ತವೆ.

 ಸಮಾಜ ಸೇವೆಯ ಹೆಸರಿನಲ್ಲಿ ಪ್ರಭುತ್ವದ ಹೊರೆಯನ್ನು ಕಡಿಮೆ ಮಾಡುತ್ತಾ, ಸಮಾಜದ ಸರ್ವತೋಮುಖ ಅಭಿವದ್ಧಿಗೆ ಪೂರಕವಾದ ಔದ್ಯಮಿಕ ಸಾಮ್ರಾಜ್ಯವನ್ನು ನಿರ್ಮಿಸುತ್ತಿರುವ ಭಾರತದ ಮತಧಾರ್ಮಿಕ-ಆಧ್ಯಾತ್ಮಿಕ ಕೇಂದ್ರಗಳ ಔದ್ಯಮಿಕ ಪ್ರಗತಿಗೆ ಭೂಮಿಯ ಪ್ರಶ್ನೆ ಮುಖ್ಯವಾಗುವುದೂ ಈ ಕಾರಣಕ್ಕಾಗಿಯೇ. ಭಾರತದಂತಹ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯ ಸಾಂಪ್ರದಾಯಿಕ ಸಮಾಜದಲ್ಲಿ ಭೂಮಿ ಜನಸಮುದಾಯಗಳ ಬದುಕಿನ ಮುಖ್ಯ ಪ್ರಶ್ನೆಯಾಗಬೇಕಿತ್ತು. ಆದರೆ ತೀವ್ರ ಶೋಷಣೆಗೊಳಗಾಗಿ, ದಾರಿದ್ರತೆಯ ಅಂಚಿನಲ್ಲಿರುವ ಸಮುದಾಯಗಳೂ ಭೂಮಿಗಾಗಿ ಹೋರಾಡುತ್ತಿಲ್ಲ. ಬದಲಾಗಿ, ಈ ಸಮುದಾಯಗಳ ಸಾಂತ್ವನದ ನೆಲೆಗಳನ್ನು ನಿರ್ಮಿಸಲು ಮತಧಾರ್ಮಿಕ-ಆಧ್ಯಾತ್ಮಿಕ ಕೇಂದ್ರಗಳು ಭೂಮಿಗಾಗಿ ಹೋರಾಡುತ್ತಿವೆ. ಇದು ವಿಡಂಬನೆಯಾದರೂ ಸತ್ಯ.

 ಹಾಗಾಗಿಯೇ ಇಂದು ದೇಶದ ಎಲ್ಲ ಭಾಗಗಳಲ್ಲಿ ಸಾವಿರಾರು ಎಕರೆ ಭೂಮಿ ಮತಧರ್ಮಗಳ ಸ್ವತ್ತಾಗಿದೆ. ಅಧ್ಯಾತ್ಮ ಕೇಂದ್ರಗಳ ಸ್ವತ್ತಾಗಿದೆ. ಒಂದು ತುಂಡು ಭೂಮಿಯನ್ನೂ ಬಿಡದೆ ಕಬಳಿಸಲು ಶಿಕ್ಷಣ, ಆರೋಗ್ಯ, ಸಮಾಜಸೇವೆ ಎಂಬ ಮಾರುಕಟ್ಟೆ ತಂತ್ರಗಳು ಬಳಕೆಯಾಗುತ್ತಿವೆ. ಮೈಸೂರಿನ ಎನ್‌ ಟಿಎಂಎಸ್ ಮಹಾರಾಣಿ ಕನ್ನಡ ಶಾಲೆಯನ್ನು ಕಬಳಿಸಿ ವಿವೇಕ ಸ್ಮಾರಕವನ್ನು ನಿರ್ಮಿಸುವ ರಾಮಕಷ್ಣ ಮಠದ ಪ್ರಯತ್ನಗಳ ಹಿಂದಿರುವುದೂ ಇದೇ ಭೂ ದಾಹ ಮತ್ತು ಭೂ ಸ್ವಾಧೀನದ ಹಪಹಪಿ. ನಮ್ಮ ಆಧುನಿಕ ವೈಚಾರಿಕ ಸಮಾಜವೂ ಸಹ ಇದನ್ನು ಪ್ರಶ್ನಿಸಲು ಮುಂದಾಗುತ್ತಿಲ್ಲ. ಏಕೆಂದರೆ ಅಧ್ಯಾತ್ಮ ಮತ್ತು ಜನಸೇವೆ ಮತಧರ್ಮಗಳ ಎಲ್ಲೆಗಳನ್ನು ಮೀರಿ ಸರ್ವಮಾನ್ಯತೆಯನ್ನು ಪಡೆದುಬಿಡುತ್ತವೆ. ಈ ಕಾರಣಕ್ಕಾಗಿಯೇ ಜಾತ್ಯತೀತತೆಗೆ ಬದ್ಧ ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷಗಳು ಅಧಿಕಾರಕ್ಕೆ ಬಂದಾಗ ಈ ಸಾಂಸ್ಕೃತಿಕ ಅಧಿಕಾರ ಕೇಂದ್ರಗಳನ್ನೇ ಆಶ್ರಯಿಸಿ, ಅವಲಂಬಿಸಿ, ಪೋಷಿಸಿ ತಮ್ಮ ಅಡಿಪಾಯವನ್ನು ಭದ್ರಪಡಿಸಿಕೊಳ್ಳುತ್ತವೆ. ಇಲ್ಲಿ ಜಾತಿ ಮತ್ತು ಸಾಮುದಾಯಿಕ ಹಿತಾಸಕ್ತಿಗಳು ಪ್ರಧಾನವಾಗಿ ಕಂಡರೂ ನಿಮಿತ್ತ ಮಾತ್ರ.

ಭಾರತದ ಸಂದರ್ಭದಲ್ಲಿ ಮತಧರ್ಮ ಮತ್ತು ಸಂಸ್ಕೃತಿಯ ನಡುವಿನ ಸಂಬಂಧಗಳನ್ನು ಸಂಕುಚಿತಗೊಳಿಸುತ್ತಿರುವಂತೆಯೇ, ಮತಧಾರ್ಮಿಕ ಪೂಜಾ ಕೇಂದ್ರಗಳು ಮತ್ತು ಆಧ್ಯಾತ್ಮಿಕ ಧ್ಯಾನ ಕೇಂದ್ರಗಳ ನಡುವಿನ ಸಂಬಂಧಗಳನ್ನೂ ಸಂಕುಚಿತಗೊಳಿಸಲಾಗುತ್ತಿರುವುದನ್ನು ನಾವು ಗಮನಿಸಲೇಬೇಕಿದೆ. ಪೂಜಾ ಕೇಂದ್ರಗಳ ಆಸರೆಯಲ್ಲಿ ಮಠೋದ್ಯಮದ ಬೆಳವಣಿಗೆಯಾಗುತ್ತಿರುವಂತೆಯೇ ಮಠಾಧಿಪತ್ಯದ ಆಶ್ರಯದಲ್ಲೇ ಪೂಜಾ ಕೇಂದ್ರಗಳೂ ವೃದ್ಧಿಯಾಗುತ್ತಿರುವುದನ್ನು ಎಲ್ಲ ಜಾತಿ ಕೇಂದ್ರಿತ ಮಠಗಳಲ್ಲೂ ಗಮನಿಸಬಹುದು. ಎಲ್ಲ ಪೂಜಾ ಕೇಂದ್ರಗಳಲ್ಲೂ ಗಮನಿಸಬಹುದು. ಪ್ರಭುತ್ವ ತನ್ನ ಸಾಮಾಜಿಕ ಹೊಣೆಗಾರಿಕೆಯಿಂದ ನುಣುಚಿಕೊಂಡು, ಸಾಮಾಜಿಕ ಪ್ರಗತಿಯನ್ನು ಕಾರ್ಪೋರೇಟ್ ಮಾರುಕಟ್ಟೆ ಶಕ್ತಿಗಳಿಗೆ ಹಸ್ತಾಂತರ ಮಾಡುತ್ತಿರುವ ಈ ಸಂದರ್ಭದಲ್ಲಿ, ಇದೇ ಬಂಡವಾಳ ಮಾರುಕಟ್ಟೆಯ ಮತ್ತೊಂದು ಕೇಂದ್ರವಾಗಿ ಮತಧರ್ಮ ಮತ್ತು ಅಧ್ಯಾತ್ಮ ರೂಪುಗೊಳ್ಳುತ್ತಿರುವುದನ್ನೂ ಗಮನಿಸಬಹುದು. ಹಾಗಾಗಿಯೇ ವಾರ್ಷಿಕ ಬಜೆಟ್ ನಲ್ಲಿ ಮಠಮಾನ್ಯಗಳಿಗೆ ನೇರವಾಗಿ ಹಣ ಸಹಾಯ ನೀಡಲಾಗುತ್ತದೆ. ಸಾರ್ವಜನಿಕ ಭೂಮಿಯನ್ನು ಈ ನೂತನ ಔದ್ಯಮಿಕ ಕ್ಷೇತ್ರಕ್ಕೆ ಉಚಿತವಾಗಿ ನೀಡಲಾಗುತ್ತದೆ. ಸಮಾಜ ಇದಕ್ಕೆ ಮೌನ ವಹಿಸುತ್ತದೆ ಎನ್ನುವುದು ಸೋಜಿಗ ಎನಿಸಿದರೂ ಸತ್ಯ.

ತಮ್ಮ ಔದ್ಯಮಿಕ ಸಾಮ್ರಾಜ್ಯ ವಿಸ್ತರಣೆಗೆ ಮಠಮಾನ್ಯಗಳು ಬಳಸುವುದು ಅಧ್ಯಾತ್ಮ, ಧ್ಯಾನ, ಯೋಗ ಮತ್ತು ಹೆಚ್ಚು ಜನಾಕರ್ಷಣೆಯ ಔಷಧೀಯ ಉದ್ಯಾನವನ ಇತ್ಯಾದಿ. ಪೂಜಾ ಸ್ಥಳಗಳು ವೈವಿಧ್ಯಮಯ ಪೂಜಾ ವಿಧಾನಗಳು, ಹೋಮ, ಯಜ್ಞ ಮತ್ತು ನಿಯತಕಾಲಿಕ ಪೂಜೆ ಆಚರಣೆಗಳ ಮೂಲಕ ಆದಾಯ ಗಳಿಸುತ್ತವೆ. ಈ ಪ್ರಕ್ರಿಯೆಯಲ್ಲಿ ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು, ವಾಸ್ತು, ಫಲಜ್ಯೋತಿಷ್ಯ, ಕುಂಡಲಿ ಜ್ಯೋತಿಷ್ಯ ಮತ್ತು ಭವಿಷ್ಯವಾಣಿಯ ಕಾರ್ಯಕ್ರಮಗಳ ಮೂಲಕ ಮತಧಾರ್ಮಿಕ-ಆಧ್ಯಾತ್ಮಿಕ ಕೇಂದ್ರಗಳ ರಾಯಭಾರಿಗಳಂತೆ ಕಾರ್ಯ ನಿರ್ವಹಿಸುತ್ತವೆ. ನಿತ್ಯ ಜೀವನದ ಜಂಜಾಟದಿಂದ ಹತಾಶೆಗೊಳಗಾಗಿರುವ ಜನಸಾಮಾನ್ಯರನ್ನು ಈ ಮಠಾಧೀಶರೆಡೆಗೆ ತಳ್ಳುವುದರಲ್ಲಿ ಈ ವ್ಯವಸ್ಥಿತ ಜಾಲ ಯಶಸ್ವಿಯಾಗುತ್ತದೆ.

   ಆದ್ದರಿಂದಲೇ ಮಠೋದ್ಯಮಗಳು ಸಾರ್ವಜನಿಕರ ದೃಷ್ಟಿಯಲ್ಲಿ ಸ್ವೀಕೃತವಾಗಿಬಿಡುತ್ತವೆ. ಮಠಮಾನ್ಯಗಳ ಶೈಕ್ಷಣಿಕ, ಆರೋಗ್ಯ ಕ್ಷೇತ್ರದ ಮತ್ತು ಹಾಗೂ ಸಮಾಜಮುಖಿ ಕಾರ್ಯಗಳನ್ನು ಸೇವೆ ಎಂದೇ ಪರಿಭಾವಿಸಲಾದರೂ, ಮೂಲತಃ ಇವೆಲ್ಲವೂ ಬಿಕರಿಯಾಗುವ ಕಚ್ಚಾ ಸರಕುಗಳೇ ಆಗಿರುತ್ತವೆ. ಬಂಡವಾಳ ಕ್ರೋಢೀಕರಣಕ್ಕೆ ಮೂಲ ಆದಾಯ ಒದಗಿಸುವ ಭಂಡಾರಗಳಾಗಿರುತ್ತವೆ. ತನ್ನ ಸಾಂವಿಧಾನಿಕ ಕರ್ತವ್ಯಗಳಾದ ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ಹೊಣೆಯನ್ನು ಪ್ರಭುತ್ವ ಈ ಸೇವಾಕೇಂದ್ರ ಗಳಿಗೆ ಒಪ್ಪಿಸುವ ಮೂಲಕ ಔದ್ಯಮಿಕ ಸಾಮ್ರಾಜ್ಯಕ್ಕೆ ಮತ್ತೊಂದು ಆಯಾಮವನ್ನು ನೀಡುತ್ತಿದೆ. ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (Corporate Social Responsibility) ಹೆಸರಿನಲ್ಲಿ ಕಾರ್ಪೋರೇಟ್ ಜಗತ್ತು ಸಲ್ಲಿಸುವ ಸಮಾಜಸೇವೆಗೂ, ಈ ಮಠೋದ್ಯಮ ಮತ್ತು ಅಧ್ಯಾತ್ಮೋದ್ಯಮಗಳು ಸಲ್ಲಿಸುವ ಜನಸೇವೆಗೂ ವ್ಯತ್ಯಾಸವೇನೂ ಇರುವುದಿಲ್ಲ.

 ಸಾಫ್ಟ್‌ವೇರ್ ಸಾಮ್ರಾಜ್ಯದ ಒಡತಿಯೊಬ್ಬರು ಎರಡೇ ಸೀರೆ ಇಟ್ಟುಕೊಂಡಿದ್ದಾರೆ, ಶ್ರೀಮಂತ ಉದ್ಯಮಿಯೊಬ್ಬರು ಸೈಕಲ್ ಬಳಸುತ್ತಾರೆ ಎನ್ನುವ ಸರಳ ಬದುಕಿನ ನಿದರ್ಶನಗಳಿಗೂ, ಪೇಜಾವರ ಶ್ರೀಗಳು ದಲಿತಕೇರಿಯಲ್ಲಿ ಪಾದಯಾತ್ರೆ ಮಾಡುತ್ತಾರೆ, ದಲಿತ ಮನೆಯಲ್ಲಿ ಊಟ ಮಾಡುತ್ತಾರೆ ಎನ್ನುವ ಉದಾಹರಣೆಗಳಿಗೂ ಮೂಲಭೂತ ವ್ಯತ್ಯಾಸವೇನೂ ಇರುವುದಿಲ್ಲ. ಇದು ಸಂಪತ್ತಿನ ಕ್ರೋಢೀಕರಣವನ್ನು ಸಾಂಸ್ಥೀಕರಣಗೊಳಿಸುವ ಔದ್ಯಮಿಕ ಸಾಮ್ರಾಜ್ಯಕ್ಕೆ ಸಾರ್ವತ್ರಿಕ ಸ್ವೀಕತಿಯನ್ನು ನೀಡಲು ಬಳಸುವ ಬೌದ್ಧಿಕ ಕಸರತ್ತು ಮಾತ್ರ. ಕೆಳಸ್ತರದ ಸಮಾಜದಲ್ಲಿನ ಬಹತ್ ಜನಸಮುದಾಯಗಳ ಸರ್ವತೋಮುಖ ಅಭಿವದ್ಧಿ ಮರೀಚಿಕೆಯಾಗಿಯೇ ಉಳಿಯವ ನಿಟ್ಟಿನಲ್ಲಿ, ಈ ಸಂಸ್ಥೆಗಳು ಮತಧರ್ಮ, ಜಾತಿ, ಸಂಸ್ಕೃತಿ ಮತ್ತು ಆಚರಣೆಗಳು ಸಾಕಷ್ಟು ಶ್ರಮ ವಹಿಸುತ್ತವೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ನಿತ್ಯ ಕಾಣಿಸಿಕೊಳ್ಳುವ ಗುರೂಜಿಗಳು, ಸ್ವಾಮೀಜಿಗಳು ಈ ಮಠಾಧಿಪತಿಗಳ, ಮಠೋದ್ಯಮಿಗಳ ರಾಯಭಾರಿಗಳಾಗಿ ಕಾರ್ಯನಿರ್ವಹಿಸುತ್ತಿರುತ್ತಾರೆ.

 ಈ ಎಲ್ಲ ವಿದ್ಯಮಾನಗಳ ಚೌಕಟ್ಟಿನಲ್ಲೇ ನಾವು ಕರ್ನಾಟಕದ ಅಥವಾ ಭಾರತದ ಮತಧರ್ಮ ಕೇಂದ್ರಿತ ಸಾಂಸ್ಕೃತಿಕ ರಾಜಕಾರಣವನ್ನು ಅವಲೋಕನ ಮಾಡಬೇಕಿದೆ. ಮಠೋದ್ಯಮಗಳು ಬಂಡವಾಳ ಮಾರುಕಟ್ಟೆಗೆ ಪೂರಕವಾಗಿಯೇ ತಮ್ಮ ರಾಜಕೀಯ ಪ್ರಾಬಲ್ಯವನ್ನೂ ಬಳಸಿಕೊಳ್ಳುತ್ತಿರುವುದನ್ನೂ ಕರ್ನಾಟಕದ ಸಂದರ್ಭದಲ್ಲಿ ನೋಡುತ್ತಿದ್ದೇವೆ. ರಾಜಕೀಯವಾಗಿ ಪ್ರಾಬಲ್ಯ ಇರುವ, ಅಂದರೆ ಮತದಾರರ ಪ್ರಮಾಣ ನಿರ್ಣಾಯಕವಾಗಿರುವ, ಜಾತಿಗಳ ಮಠೋದ್ಯಮಿಗಳು ಅಧಿಕಾರ ರಾಜಕಾರಣದ ಮೇಲೆಯೂ ತಮ್ಮ ಹಿಡಿತವನ್ನು ಸಾಧಿಸಿರುತ್ತಾರೆ. ರಾಜ್ಯ ಯಡಿಯೂರಪ್ಪ ಸರ್ಕಾರ ಇದಕ್ಕೊಂದು ಪ್ರಾತ್ಯಕ್ಷಿಕೆ. ಹಾಗೆಂದ ಮಾತ್ರಕ್ಕೆ ಉಳಿದ ಜಾತಿ ಮಠಗಳು ನೇಪಥ್ಯದಲ್ಲಿರುವುದಿಲ್ಲ. ತಮ್ಮದೇ ಆದ ರಾಜಕೀಯ ಪ್ರಾಬಲ್ಯವನ್ನು ಬಳಸಿ ಸಾಮ್ರಾಜ್ಯ ವಿಸ್ತರಣೆಯಲ್ಲಿ ತೊಡಗಿರುತ್ತವೆ. ದೇಶದ ಸಾಂಸ್ಕೃತಿಕ ರಾಜಕಾರಣದ ವಾರಸುದಾರ ಶಕ್ತಿಯಾಗಿ ಹಿಂದುತ್ವ ರಾಜಕಾರಣ ವೈದಿಕ ಮಠಗಳ ಮೂಲಕ ಸಾಂಸ್ಕೃತಿಕ ಮೇಲುಗೈ ಸಾಧಿಸಿರುತ್ತದೆ. ಹಾಗಾಗಿಯೇ ಕರ್ನಾಟಕದಲ್ಲಿ ರಾಜಕೀಯ ಸಂಖ್ಯಾಬಲ ಇಲ್ಲದಿದ್ದರೂ ಪೇಜಾವರ ಮಠ ಲಿಂಗಾಯತ ಮಠೋದ್ಯಮಿಗಳೊಡನೆ ದನಿಗೂಡಿಸಿ, ಯಡಿಯೂರಪ್ಪಸರ್ಕಾರದ ರಕ್ಷಣೆಗೆ ಟೊಂಕಕಟ್ಟಿ ನಿಲ್ಲುತ್ತದೆ.

  ಬಂಡವಾಳಶಾಹಿ ವ್ಯವಸ್ಥೆ ಮತ್ತು ಹಣಕಾಸು ಬಂಡವಾಳದ ಕಾಪೋರೇಟ್ ರಾಜಕಾರಣ ಎಲ್ಲ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಬೇರೂರಲು ಮಠೋದ್ಯಮ ಮತ್ತು ಮಠಾಧಿಪತಿಗಳ ರಾಜಕೀಯ ಚಟುವಟಿಕೆಗಳೂ ಪೂರಕವಾಗಿಯೇ ಇರಬೇಕಾಗುತ್ತದೆ. ಈಗಾಗಲೇ ಖಾವಿ ಭಾರತದ ಶಾಸನಸಭೆಯನ್ನು ಪ್ರವೇಶಿಸಿದೆ, ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಆಗಿರುವುದೂ ಉಂಟು, ಸಂಸತ್ತಿನಲ್ಲಿ ಪ್ರಮುಖ ಹುದ್ದೆಯನ್ನೂ ದಯಪಾಲಿಸಲಾಗಿದೆ. ಕರ್ನಾಟಕದಲ್ಲಿ ಹಿಂಬಾಗಿಲಿನಿಂದ ನಡೆಯುತ್ತಿದ್ದ ರಾಜಕಾರಣ ಬಹುಶಃ ಈಗ ಮುಖ್ಯದ್ವಾರವನ್ನೇ ಆಕ್ರಮಿಸಲಿದೆ. ಅಧ್ಯಾತ್ಮ, ಮತಧರ್ಮ ಮತ್ತು ವೈದಿಕ ಸಂಪ್ರದಾಯದ ಜಗತ್ತು, ಹಿಂದುತ್ವ ಭಾರತದ ಫ್ಯಾಸಿಸಂಗೆ ಸಾಂಸ್ಕೃತಿಕ ಆಯಾಮವನ್ನು ಒದಗಿಸಲು ಸಜ್ಜಾಗುತ್ತಿರುವ ಅಪಾಯವನ್ನು ಇನ್ನಾದರೂ ಗಮನಿಸಬೇಕಿದೆ.



Join Whatsapp