ಪುಲ್ವಾಮಾ ದಾಳಿ ಬೆಂಬಲಿಸಿ ಪೋಸ್ಟ್ : ಎಂಜಿನಿಯರಿಂಗ್ ವಿದ್ಯಾರ್ಥಿ ಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ ಎನ್ ಐಎ ವಿಶೇಷ ನ್ಯಾಯಾಲಯ

Prasthutha|

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದ 40 ಸಿಆರ್ ಪಿಎಫ್ ಪೊಲೀಸರು ಹುತಾತ್ಮರಾಗಿದ್ದಕ್ಕೆ ಸಂಬಂಧಿಸಿದಂತೆ ಫೇಸ್ಬುಕ್ ನಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಬೆಂಗಳೂರಿನ ಕಾಚರಕನಹಳ್ಳಿಯ ಎಂಜಿನಿಯರಿಂಗ್ ವಿದ್ಯಾರ್ಥಿ ಫೈಜ್ ರಶೀದ್ ಗೆ ಬೆಂಗಳೂರಿನ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ ಐಎ) ವಿಶೇಷ ನ್ಯಾಯಾಲಯವು ಐದು ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

- Advertisement -

ಸಿಆರ್ ಪಿಸಿ ಸೆಕ್ಷನ್ 235(2) ಅನ್ವಯ ಭಾರತೀಯ ದಂಡ ಸಂಹಿತೆ ಸೆಕ್ಷನ್ ಗಳಾದ 153ಎ (ಶಾಂತಿ ಕದಡಲು ಪ್ರಚೋದನೆ) ಮತ್ತು 201 (ಸಾಕ್ಷ್ಯ ನಾಶ) ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಸೆಕ್ಷನ್ 13ರ (ಕಾನೂನುಬಾಹಿರ ಚಟುವಟಿಕೆ ಪೋಷಿಸುವುದು) ಅಡಿ ಫೈಜ್ ರಶೀದ್ ನನ್ನು ದೋಷಿ ಎಂದು ವಿಶೇಷ ನ್ಯಾಯಾಧೀಶರಾದ ಸಿ ಎಂ ಗಂಗಾಧರ ಅವರ ನೇತೃತ್ವದ ಪೀಠ ತೀರ್ಮಾನ ಮಾಡಿದೆ.

ಐಪಿಸಿ ಸೆಕ್ಷನ್ 153ಎ ಅಡಿ ಅಪರಾಧಕ್ಕಾಗಿ ಮೂರು ವರ್ಷ ಜೈಲು ಹಾಗೂ 10 ಸಾವಿರ ರೂಪಾಯಿ, ಐಪಿಸಿ 201ರ ಅಡಿ ಅಪರಾಧಕ್ಕಾಗಿ ಮೂರು ವರ್ಷ ಜೈಲು ಮತ್ತು ಐದು ಸಾವಿರ ರೂಪಾಯಿ ಹಾಗೂ ಯುಎಪಿಎ ಸೆಕ್ಷನ್ 13ರ ಅಡಿ ಅಪರಾಧಕ್ಕಾಗಿ ಐದು ವರ್ಷ ಜೈಲು ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಜೈಲು ಶಿಕ್ಷೆಯು ಏಕಕಾಲಕ್ಕೆ ಚಾಲ್ತಿಗೆ ಬರಲಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಫ್ರೈಝ್ ಹೆಚ್ಚುವರಿಯಾಗಿ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಿದೆ.

- Advertisement -

ಫ್ರೈಝ್ 2019ರ ಫೆಬ್ರವರಿ 17ರಂದು ಬಂಧಿಸಲಾಗಿದ್ದು, ಅಂದಿನಿಂದಲೂ ಆತ ಜೈಲಿನಲ್ಲಿರುವುದರಿಂದ ಶಿಕ್ಷೆಯ ಪ್ರಮಾಣದಲ್ಲಿ ಈಗಾಗಲೇ ಜೈಲಿನಲ್ಲಿ ಕಳೆದಿರುವ ಅವಧಿಯು ಕಡಿತವಾಗಲಿದೆ.

ಸುದ್ದಿ ವಾಹಿನಿಗಳು ಫೇಸ್’ಬುಕ್’ನಲ್ಲಿ ಪೋಸ್ಟ್ ಮಾಡಿದ್ದ ಎಲ್ಲಾ ಪೋಸ್ಟ್ಗಳಿಗೂ ಪ್ರತಿಕ್ರಿಯಿಸಿರುವುದನ್ನು ಹೊರತುಪಡಿಸಿ ಆರೋಪಿಯು ಯಾವುದೇ ದಾಳಿ ನಡೆಸಿಲ್ಲ. 24ಕ್ಕೂ ಹೆಚ್ಚು ಬಾರಿ ಆರೋಪಿಯು ತನ್ನ ಖಾತೆಯ ಮೂಲಕ ಪ್ರತಿಕ್ರಿಯಿಸಿದ್ದಾನೆ ಎಂದು ಪೀಠವು ಆದೇಶದಲ್ಲಿ ಹೇಳಿದೆ.

2019ರ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಉಗ್ರರ ದಾಳಿಯಿಂದಾಗಿ ಮೃತಪಟ್ಟಿದ್ದ ಯೋಧರ ಸಾವನ್ನು ಅಣಕ ಮಾಡಿ ಫೈಜ್ ರಶೀದ್ ತನ್ನ ಫೇಸ್ಬುಕ್ ಖಾತೆಯಲ್ಲಿ “40 ಜನರ ಪ್ರಾಣಕ್ಕೆ ಒಬ್ಬ ಮುಸಲ್ಮಾನ್ ಎರವಾದ; ಕಾಶ್ಮೀರದ ಹೀರೊ” ಎಂದು ಹಾಕಿದ್ದನೆಂದೂ, ಅಲ್ಲದೆ, ಗುಂಪು ಹತ್ಯೆ, ರಾಮ ಮಂದಿರ, 2002ರ ದಾಳಿಗಳಿಗೆ ಇದು ಪ್ರತೀಕಾರವಾಗಿದೆ… ಇದು ಟ್ರೇಲರ್ ಅಷ್ಟೇ ಆಗಿದ್ದು, ಪಿಕ್ಚರ್ ಇನ್ನೂ ಬಾಕಿ ಇದೆ. ಭಾರತೀಯ ಸೇನೆ ಹೇಗಿದೆ ಭೀತಿ? ಎಂದು ಪೋಸ್ಟ್ ಹಾಕಿದ್ದಾನೆಂದಯ ಆರೋಪಿಸಲಾಗಿತ್ತು. 2019ರ ಫೆಬ್ರವರಿ 17ರಂದು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಕೆ ಎನ್ ಯಶವಂತ್ ಕುಮಾರ್ ನೀಡಿದ ದೂರಿನ ಮೇರೆಗೆ ಬಾಣಸವಾಡಿ ಪೊಲೀಸರು ಐಪಿಸಿ ಸೆಕ್ಷನ್ಗಳಾದ 153ಎ, 124ಎ, 201 ಮತ್ತು ಯುಎಪಿಎ ಸೆಕ್ಷನ್ 13ರ ಪ್ರಕರಣ ದಾಖಲಿಸಿದ್ದರು.



Join Whatsapp