ಸ್ಪೇನ್ನಲ್ಲಿ ನಡೆಯುತ್ತಿರುವ U-23 ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ತೆರಳಬೇಕಿದ್ದ 21 ಭಾರತೀಯ ಕುಸ್ತಿಪಟುಗಳ ವೀಸಾ ಅರ್ಜಿಗಳನ್ನು, ಭಾರತದಲ್ಲಿನ ಸ್ಪ್ಯಾನಿಷ್ ರಾಯಭಾರ ಕಚೇರಿಯು ಸೋಮವಾರ ತಿರಸ್ಕರಿಸಿದೆ.
ಆಟಗಾರರ ಹೊರತಾಗಿ, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮಹಾವೀರ ಪ್ರಸಾದ್ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತ ಅಲ್ಕಾ ತೋಮರ್ ಸೇರಿದಂತೆ ಹಲವು ತರಬೇತುದಾರರಿಗೂ ವೀಸಾ ನೀಡಲು ಸ್ಪ್ಯಾನಿಷ್ ರಾಯಭಾರ ಕಚೇರಿ ನಿರಾಕರಿಸಿದೆ. ಈ ನಡುವೆ ಕೇವಲ 9 ಮಂದಿ ಕುಸ್ತಿಪಟುಗಳಿಗೆ ಮಾತ್ರ ವೀಸಾ ದೊರೆತಿದೆ.
ವೀಸಾ ನಿರಾಕರಿಸುವ ಕುರಿತು ಸ್ಪ್ಯಾನಿಷ್ ರಾಯಭಾರ ಕಚೇರಿಯು ಕಳುಹಿಸಿರುವ ಪತ್ರದಲ್ಲಿ, ʻವೀಸಾ ಅವಧಿ ಮುಗಿಯುವ ಮೊದಲು ಸದಸ್ಯ ರಾಷ್ಟ್ರಗಳ ಸದಸ್ಯರು, ಆಯೋಜಕ ರಾಷ್ಟ್ರವನ್ನು ತೊರೆಯುವ ಕುರಿತು ಅನುಮಾನವಿದೆʼ ಎಂಬ ವಿಚಿತ್ರವಾದ ಕಾರಣ ನೀಡಿದೆ. ಈ ಪತ್ರದ ಕೊನೆಯಲ್ಲಿ ಕಾನ್ಸುಲರ್ ವಿಭಾಗದ ಮುಖ್ಯಸ್ಥರು ಸಹಿ ಮಾಡಿದ್ದಾರೆ.
U-23 ಕುಸ್ತಿ ವಿಶ್ವ ಚಾಂಪಿಯನ್ಶಿಪ್ ಸೋಮವಾರದಿಂದ ಪಾಂಟೆವೆಡ್ರಾದಲ್ಲಿ ಆರಂಭವಾಗಿದೆ. ಕೂಟದಲ್ಲಿ ಹೆಚ್ಚಿನ ಪದಕಗಳನ್ನು ಗೆಲ್ಲುವ ಉತ್ಸಾಹದಲ್ಲಿದ್ದ ಯುವ ಭಾರತ ತಂಡಕ್ಕೆ, ಸ್ಪ್ಯಾನಿಷ್ ರಾಯಭಾರ ಕಚೇರಿಯ ನಿರ್ಧಾರದಿಂದಾಗಿ ತೀವ್ರ ಹಿನ್ನಡೆಯಾಗಿದೆ. ಅದಾಗಿಯೂ, ವೀಸಾ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನ ಮುಂದುವರಿಸಲಾಗುವುದು ಎಂದು ಭಾರತೀಯ ಅಧಿಕಾರಿಗಳು ಹೇಳಿದ್ದಾರೆ.
ವೀಸಾ ನಿರಾಕರಿಸಲ್ಪಟ್ಟವರಲ್ಲಿ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಿ ಅಂತಿಮ್ ಪೋಗಾಟ್ ಸಹ ಸೇರಿದ್ದಾರೆ. ಅಂತಿಮ್, ಈ ವರ್ಷದ ಆರಂಭದಲ್ಲಿ ನಡೆದಿದ್ದ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ 53 ಕೆಜಿ ತೂಕದ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಆ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಇತಿಹಾಸವನ್ನು ಸೃಷ್ಟಿಸಿದ್ದರು.
ವೀಸಾ ತಿರಸ್ಕರಿಸಲ್ಪಟ್ಟ ಕಾರಣ ಮಹಿಳಾ ವಿಭಾಗದ 55, 57, 62, 65, 68, 72 ಹಾಗೂ 76 ಕೆಜಿ ವಿಭಾಗದಲ್ಲಿ ಮತ್ತು ಪುರುಷರ ಫ್ರೀ ಸ್ಟೈಲ್ನಲ್ಲಿ 61, 65, 70, 74, 79, 86, 92, 97, 125 ಕೆಜಿ ವಿಭಾಗ) ಮತ್ತು ಗ್ರೀಕೋ ರೋಮನ್ ವಿಭಾಗದಲ್ಲಿ ಭಾರತದ ಸ್ಪರ್ಧಿಗಳೇ ಇಲ್ಲದಂತಾಗಿದೆ. ಪುರುಷರ ಫ್ರೀಸ್ಟೈಲ್ ವಿಭಾಗದ ಪಂದ್ಯಗಳು ಅಕ್ಟೋಬರ್ 20 ರಿಂದ ಅಕ್ಟೋಬರ್ 23 ರಿಂದ ನಡೆಯಲಿದೆ.
ದಿಢೀರ್ ಬೆಳವಣಿಗೆಗಳ ಕುರಿತಾಗಿ ಪ್ರತಿಕ್ರಿಯಿಸಿರುವ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್ಐ) ಕಾರ್ಯದರ್ಶಿ ವಿನೋದ್ ತೋಮರ್, ʻ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಹಿಂದೆಂದೂ ಈ ರೀತಿಯ ಘಟನೆ ಸಂಭವಿಸಿಲ್ಲ. ವೀಸಾ ಪ್ರಕ್ರಿಯೆಗಳಿಗಾಗಿ ಅಕ್ಟೋಬರ್ 4ರಂದು ಸ್ಪ್ಯಾನಿಷ್ ರಾಯಭಾರ ಕಚೇರಿಗ ಪಾಸ್ಪೋರ್ಟ್ಗಳನ್ನು ಸಲ್ಲಿಸಿದ್ದೇವೆ. ಅಥ್ಲೀಟ್ಗಳಿಗೆ ವೀಸಾ ನಿರಾಕರಿಸಿರುವ ಕುರಿತಾದ ಪತ್ರವನ್ನು ಸೋಮವಾರ ನಾವು ಪಡೆದುಕೊಂಡಿದ್ದೇವೆ” ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.