ರಾಜ್ಯಪಾಲರ ಭೇಟಿಯ ವೇಳೆ ಸಿಕ್ಖರು, ಮುಸ್ಲಿಮರ ಮೇಲೆ ನಿಗಾಯಿರಿಸಿ ಎಂದು ಆದೇಶ ಹೊರಡಿಸಿದ ಪೊಲೀಸ್ ಅಧೀಕ್ಷಕ !

Prasthutha|

ಮಧ್ಯಪ್ರದೇಶ: ಇಲ್ಲಿನ ಕಟನಿ ಜಿಲ್ಲಾ ಪೊಲೀಸ್ ಅಧೀಕ್ಷಕ ಸುನಿಲ್ ಕುಮಾರ್ ಜೈನ್ ಸಿಖ್ ಮತ್ತು ಮುಸ್ಲಿಮರನ್ನು ಭಯೋತ್ಪಾದಕ ಗುಂಪುಗಳೊಂದಿಗೆ ಸಮೀಕರಿಸಿ ಹೊರಡಿಸಿರುವ ಆದೇಶವು ರಾಜ್ಯಾದ್ಯಂತ ವಿವಾದಕ್ಕೆ ಕಾರಣವಾಗಿದೆ. ಕಟನಿ ಜಿಲ್ಲೆಗೆ ರಾಜ್ಯಪಾಲ ಮಂಗುಭಾಯಿ ಸಿ.ಪಟೇಲ್ ಅವರ ಭೇಟಿ ನೀಡುತ್ತಿದ್ದು, ಈ ಬಗ್ಗೆ ಹೊರಡಿಸಿರುವ ಭದ್ರತಾ ವ್ಯವಸ್ಥೆಗಳ ಕುರಿತ ಆದೇಶವು ವಿವಾದದ ಕಿಡಿ ಹೊತ್ತಿಸಿದೆ.

- Advertisement -

ಪೊಲೀಸ್ ಅಧೀಕ್ಷಕ ಜೈನ್ ಹೊರಡಿಸಿರುವ 23 ನಿರ್ದೇಶಗಳಲ್ಲಿನ ಆದೇಶದಲ್ಲಿ, ‘ಸಿಕ್ಖರು, ಮುಸ್ಲಿಮರು, ಜೆಕೆಎಲ್ಎಫ್, ಉಲ್ಫಾ, ಸಿಮಿ ಮತ್ತು ಎಲ್‌ಟಿಟಿಇ ಮೇಲೆ ನಿಕಟ ನಿಗಾಯಿರಿಸುವಂತೆ’ ಸೂಚಿಸಲಾಗಿದೆ. ಸದ್ಯ ಈ ಆದೇಶವು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದು, ಹಲವಾರು ಟೀಕೆಯ ಬಳಿಕ ಜೈನ್ ಕ್ಷಮೆಯನ್ನು ಯಾಚಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸುನಿಲ್ ಕುಮಾರ್ ಜೈನ್ ‘ತಪ್ಪಿನ ಬಗ್ಗೆ ವಿಷಾದಿಸುತ್ತೇನೆ. ಯಾವುದೇ ಸಮುದಾಯದ ಭಾವನೆಗಳನ್ನು ನೋಯಿಸುವ ಉದ್ದೇಶ ನಮ್ಮದಾಗಿರಲಿಲ್ಲ, ಈ ಬರಹವು ದೋಷವಾಗಿತ್ತು . ಆದೇಶ ಸಿದ್ಧಪಡಿಸಿದ ಗುಮಾಸ್ತನ ವಿರುದ್ಧ ಕಠಿಣ ಶಿಸ್ತುಕ್ರಮವನ್ನು ಜರುಗಿಸುವುದಾಗಿ ಹೇಳಿದ್ದಾರೆ.

- Advertisement -

ಪೊಲೀಸ್ ಆದೇಶದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ಸುನಿಲ್ ಕುಮಾರ್ ಅವರು ಪೊಲೀಸ್ ಅಧೀಕ್ಷಕರೇ ಅಥವಾ ಬಿಜೆಪಿಯ ವಕ್ತಾರರೇ ಎಂದು ಪ್ರಶ್ನಿಸಿದೆ. ಇದುವರೆಗೆ ಬಿಜೆಪಿಯಷ್ಟೆ ದೇಶದ ರೈತರು ಮತ್ತು ಮುಸ್ಲಿಮರನ್ನು ಭಯೋತ್ಪಾದಕರಂತೆ ಬಿಂಬಿಸುತ್ತಿತ್ತು. ಆದರೆ ಈಗ ಪೊಲೀಸರೂ ಅವರನ್ನು ಭಯೋತ್ಪಾದಕರೆಂದು ಬಿಂಬಿಸುತ್ತಿದ್ದಾರೆ, ಖಂಡಿತವಾಗಿಯೂ ಈ ಸರಕಾರ ನಿಮ್ಮನ್ನು ಪದ್ಮಶ್ರೀ ಪ್ರಶಸ್ತಿಯೊಂದಿಗೆ ಗೌರವಿಸುತ್ತದೆ ಎಂದು ಹರಿಹಾಯ್ದಿದೆ.

Join Whatsapp