ಬೆಂಗಳೂರು: ದಕ್ಷಿಣ ಏಷ್ಯಾದ ಅತಿ ದೊಡ್ಡ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ನಿರ್ಮಾಣ ತಂತ್ರಜ್ಞಾನದ “ಎಕ್ಸ್ ಕಾನ್” ನ 11 ನೇ ಮೇಳ ಮೇ 17 ರಿಂದ 21 ಬೆಂಗಳೂರಿನ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ [ಬಿಐಇಸಿ]ಯಲ್ಲಿ ಐದು ದಿನಗಳ ಕಾಲ ನಡೆಯಲಿದೆ.
ಇದಕ್ಕಾಗಿ ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿದ್ದು, ಮೂಲ ಸೌಕರ್ಯ ವಲಯದಲ್ಲಿ ಆಗುತ್ತಿರುವ ಗಮನಾರ್ಹ ಬೆಳವಣಿಗೆ ಹಿನ್ನೆಲೆಯಲ್ಲಿ ಈ ಮೇಳ ಜಾಗತಿಕವಾಗಿ ಅತ್ಯಂತ ಮಹತ್ವ ಪಡೆದಿದೆ. ನಿರ್ಮಾಣ ವಲಯದಲ್ಲಿರುವ ಆಧುನಿಕ ಪರಿಕರಗಳು, ಹೊಸ ತಂತ್ರಜ್ಞಾನ, ಭವಿಷ್ಯದ ತಾಂತ್ರಿಕತೆ, ದೇಶದ ಮೂಲ ಸೌಕರ್ಯ ಅಭಿವೃದ್ದಿಯಲ್ಲಿ ಹೊಸ ಪರಿಕರಗಳ ಪಾತ್ರದ ಕುರಿತು ಮೇಳದಲ್ಲಿ ಬೆಳಕು ಚೆಲ್ಲಲಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಐ ನ ಕರ್ನಾಟಕ ವಿಭಾಗದ ಮುಖ್ಯಸ್ಥ ರಮಾನಾಥ್ ರಾಮದುರೈ, 2021 ರ ಎಕ್ಸಾನ್ ಅಧ್ಯಕ್ಷ ದೀಪಕ್ ಶೆಟ್ಟಿ, ಹೊಸ ಜಗತ್ತಿಗೆ ಭಾರತ ನಿರ್ಮಾಣ- ಸ್ಪರ್ಧಾತ್ಮಕತೆ, ಬೆಳವಣಿಗೆ, ಸುಸ್ಥಿರತೆ, ತಂತ್ರಜ್ಞಾನ’ ಎಂಬ ವಿಷಯದ ಮೇಲೆ ಈ ಮೇಳವನ್ನು ಕೇಂದ್ರೀಕರಿಸಲಾಗುತ್ತಿದೆ. ಎಕ್ಸ್ ಕಾನ್ ಆತ್ಮ ನಿರ್ಭರ ಭಾರತದ ಕನಸುಗಳನ್ನು ಸಾಕಾರಗೊಳಿಸುತ್ತಿದ್ದು, ಈ ಬಾರಿ ಪರ್ಯಾಯ ಇಂಧನಗಳು, ಮೂಲಸೌಕರ್ಯ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ, ಡಿಜಿಟಲ್ ಪರಿವರ್ತನೆ ಸೇರಿದಂತೆ ಹಲವು ಅಂಶಗಳ ಕುರಿತು ಬೆಳಕು ಚೆಲ್ಲಲಾಗುತ್ತಿದೆ ಎಂದು ಮಾಹಿತಿ ನೀಡಿದರು.
3,00,000 ಚದರ ಮೀಟರ್ ವಿಸ್ತಾರವಾದಲ್ಲಿ 1000 ಕ್ಕೂ ಹೆಚ್ಚು ಪ್ರದರ್ಶಕರು, 400 ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ. ಪ್ರಮುಖವಾಗಿ ಚೀನಾ, ಫಿನ್ಲ್ಯಾಂಡ್, ಜರ್ಮನಿ, ಇಟಲಿ, ದಕ್ಷಿಣ ಕೊರಿಯಾ, ಟರ್ಕಿ, ಯುಕೆ, ಯುಎಸ್ಎ ಸೇರಿದಂತೆ ಇನ್ನಿತರೆ ದೇಶಗಳ ಕಂಪನಿಗಳು ಪಾಲ್ಗೊಳ್ಳಲಿವೆ ಎಂದರು. ದೀಪಕ್ ಶೆಟ್ಟಿ ಮಾತನಾಡಿ, ನಮ್ಮ ಆರ್ಥಿಕತೆ `ನವ ಭಾರತ’ದತ್ತ ಹೆಜ್ಜೆ ಇಡುತ್ತಿರುವ ಸಂದರ್ಭದಲ್ಲಿ ನಡೆಯುತ್ತಿರುವ ಈ ಮೇಳ ಅತ್ಯಂತ ಮಹತ್ವದ್ದಾಗಿದೆ.
ಹೆಚ್ಚುವರಿಯಾಗಿ 25,000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಸೇರಿದಂತೆ ಇನ್ನಿತರೆ ಉಪಕ್ರಮಗಳನ್ನು ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಪ್ರಕಟಿಸಲಾಗಿದ್ದು, ಈ ನಿಟ್ಟಿನಲ್ಲಿ ವಿಶ್ವದರ್ಜೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ದೇಶದ ಮೂಲಸೌಕರ್ಯ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಕ್ಕೆ ತರುವ ದಿಸೆಯಲ್ಲಿ ಎಕ್ಸ್ ಕಾನ್ ಪ್ರಮುಖ ಪಾತ್ರ ವಹಿಸಲಿದೆ’’ ಎಂದು ಅವರು ಹೇಳಿದರು.