ಕೇಪ್ ಟೌನ್: ಒಬ್ಬ ಮಹಿಳೆಗೆ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದಲು ಅವಕಾಶ ನೀಡುವ ಶಾಸನವನ್ನು ಜಾರಿಗೆ ತರಲು ದಕ್ಷಿಣ ಆಫ್ರಿಕಾದ ಸರ್ಕಾರ ನಿರ್ಧರಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ಸಲಿಂಗ ಮದುವೆ ಮತ್ತು ಪುರುಷರು ಬಹುಪತ್ನಿತ್ವ ಹೊಂದಲು ಅನುಮತಿಯಿದೆ. ಆದರೆ ಈ ದೇಶದಲ್ಲಿ ಮಹಿಳೆಯರು ಒಬ್ಬ ಗಂಡನನ್ನು ಮಾತ್ರ ಹೊಂದಬಹುದು ಎಂದು ಕಾನೂನು ಹೇಳುತ್ತದೆ. ಈ ವಿಷಯದಲ್ಲಿ ಲಿಂಗ ಹಕ್ಕುಗಳ ಕಾರ್ಯಕರ್ತರು ಸಮಾನ ನ್ಯಾಯವನ್ನು ಕೋರಿರುವುದರಿಂದ ಸರ್ಕಾರ ಹೊಸ ಶಾಸನಕ್ಕೆ ಸಿದ್ಧತೆ ನಡೆಸುತ್ತಿದೆ. ಇದರ ಭಾಗವಾಗಿ, ಗೃಹ ಇಲಾಖೆ ಪ್ರಕಟಿಸಿದ ಕರಡು ವರದಿ (ಗ್ರೀನ್ ಪೇಪರ್) ಮಹಿಳೆಯರಿಗೆ ಒಂದಕ್ಕಿಂತ ಹೆಚ್ಚು ಗಂಡಂದಿರನ್ನು ಹೊಂದಬಹುದು ಎಂದು ಸೂಚಿಸಿದೆ. ಈ ಕುರಿತು ದೇಶದಲ್ಲಿ ಭಾರೀ ಪರ ವಿರೋಧ ಚರ್ಚೆಗಳು ನಡೆಯುತ್ತಿದೆ. ಆದರೆ ಸಂಪ್ರದಾಯವಾದಿಗಳು ಮತ್ತು ಕೆಲವು ಧಾರ್ಮಿಕ ಸಂಘಟನೆಗಳು ದೇಶದ ವಿವಾಹ ಕಾನೂನನ್ನು ಸುಧಾರಿಸುವ ಸರ್ಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿವೆ.
“ಇಂತಹಾ ಕಾನೂನುಗಳು ಆಫ್ರಿಕನ್ ಸಂಸ್ಕೃತಿಯನ್ನು ಹಾಳು ಮಾಡುತ್ತದೆ. ಈ ರೀತಿಯ ಮದುವೆಗಳಾಗಿ ಹುಟ್ಟಿದ ಮಕ್ಕಳ ಪರಿಸ್ಥಿತಿ ಏನು? ಅವರನ್ನು ಹೇಗೆ ಗುರುತಿಸುವುದು.ಮಹಿಳೆ ಪುರುಷನ ಪಾತ್ರವನ್ನು ನಿಭಾಯಿಸಲು ಸಾಧ್ಯವಿಲ್ಲ” ಎಂದು ಸಂಪ್ರದಾಯವಾದಿ ಮೂಸಾ ಮೆಸಲುಕು ಮಾಧ್ಯಮಕ್ಕೆ ತಿಳಿಸಿದರು. ‘ಬಹುಪತ್ನಿತ್ವವನ್ನು ಅಂಗೀಕರಿಸಬಹುದಾಗಿದೆ. ಆದರೆ ಬಹುಪತಿತ್ವ ಹಾಗೆ ಅಲ್ಲ. ಮಹಿಳೆಗೆ ಒಂದಕ್ಕಿಂತ ಹೆಚ್ಚು ಗಂಡಂದಿರೊಂದಿಗೆ ವಾಸಿಸಲು ಸಾಧ್ಯವಿಲ್ಲ. ಏಕೆಂದರೆ ಪುರುಷರು ಅಸೂಯೆ ಮತ್ತು ಸ್ವಾರ್ಥಿಗಳಾಗಿದ್ದಾರೆ ಎಂದು ಆಫ್ರಿಕನ್ ಕ್ರಿಶ್ಚಿಯನ್ ಡೆಮಾಕ್ರಟಿಕ್ ಪಾರ್ಟಿ ನಾಯಕ ಕೆನ್ನೆತ್ ಮೆಶೋ ಹೇಳಿದರು.