ಬಂಗಾಳ ಕ್ರಿಕೆಟ್ ಸಂಸ್ಥೆಯ  ಅಧ್ಯಕ್ಷ ಸ್ಥಾನದ ಮೇಲೆ ಸೌರವ್‌ ಗಂಗೂಲಿ ಕಣ್ಣು

Prasthutha|

ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ಖಚಿತವಾಗುತ್ತಿದ್ಧಂತೆಯೇ ಸೌರವ್‌ ಗಂಗೂಲಿ, ಮತ್ತೊಮ್ಮೆ ಬಂಗಾಳ ಕ್ರಿಕೆಟ್ ಸಂಸ್ಥೆಯ  ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ.

- Advertisement -

ಸಿಎಬಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 22 ಅಂತಿಮ  ದಿನವಾಗಿದೆ. ʻಅಕ್ಟೋಬರ್ 22 ರಂದು ಬಂಗಾಳ ಕ್ರಿಕೆಟ್ ಸಂಸ್ಥೆಯ   ಅಧ್ಯಕ್ಷ ಸ್ಥಾನಕ್ಕೆ ನಾನು ನಾಮಪತ್ರ ಸಲ್ಲಿಸಲಿದ್ದೇನೆ. ಈ ಹಿಂದೆ 5 ವರ್ಷಗಳ ಕಾಲ ಸಿಎಬಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಲೋಧಾ ಸಮಿತಿಯ ಅನುಷ್ಠಾನಗೊಂಡ ಶಿಫಾರಸುಗಳ ಅನುಸಾರ ಇನ್ನೂ ನಾಲ್ಕು ವರ್ಷಗಳ ನಾನು ಮುಂದುವರಿಯಬಹುದಾಗಿದೆ. ಅಕ್ಟೋಬರ್ 20 ರ ಒಳಗಾಗಿ ಸಮಿತಿಯಲ್ಲಿ ಈ ಕುರಿತು ಚರ್ಚಿಸಿ ನಿರ್ಧರಿಸುತ್ತೇವೆʼ ಎಂದು ʼ ಎಂದು ಶನಿವಾರ ಕೋಲ್ಕತ್ತಾದಲ್ಲಿ ಗಂಗೂಲಿ ಪಿಟಿಐಗೆ ತಿಳಿಸಿದ್ದಾರೆ.

ಬಂಗಾಳ ಕ್ರಿಕೆಟ್ ಸಂಸ್ಥೆಯ  ಅಧ್ಯಕ್ಷರಾಗಿರುವ ಅವಿಶೇಕ್ ದಾಲ್ಮಿಯಾ ಅವರು ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಆಡಳಿತ ಮಂಡಳಿಯನ್ನು ಸೇರಲಿದ್ದಾರೆ. ದಾಲ್ಮಿಯಾ ಅವರಿಂದ ತೆರವಾಗುವ ಹುದ್ದಗೆ ಗಂಗೂಲಿ ಅವರ ಹಿರಿಯ ಸಹೋದರ ಸ್ನೇಹಸಿಸ್ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಸ್ವತಃ ಗಂಗೂಲಿ ಕಣಕ್ಕೆ ಇಳಿಯುವುದರೊಂದಿಗೆ ಚುನಾವಣಾ ಸಮೀಕರಣಗಳು ಬದಲಾಗಲಿವೆ.

- Advertisement -

2015-2019ರ ಅವಧಿಯಲ್ಲಿ ಸೌರವ್‌ ಗಂಗೂಲಿ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಅದಕ್ಕೂ ಮೊದಲು, ಜಗಮೋಹನ್ ದಾಲ್ಮಿಯಾ ನಿಧನರಾದ ಹಿನ್ನಲೆಯಲ್ಲಿ ಗಂಗೂಲಿ, ಬಂಗಾಳ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯಾಗಿ ನೇಮಕವಾಗಿದ್ದರು. ಬಳಿಕ 2019ರಲ್ಲಿ ಬಿಸಿಸಿಐ ಅಧ್ಯಕ್ಷ ಪದವಿಗೇರಿದರು. ಎರಡನೇ ಅವಧಿಗೆ ಮುಂದುವರಿಯಲು ಕೂಲಿಂಗ್ ಆಫ್ ಅವಧಿ ವಿಸ್ತರಣೆಗೆ ಅವಕಾಶ ಕೋರಿ ಸುಪ್ರೀಂಕೋರ್ಟ್‌ ಮೆಟ್ಟಿಲೇರಿ ಯಶಸ್ವಿಯಾಗಿದ್ದರು. ಅದಾಗಿಯೂ, ಆ ನಂತರದಲ್ಲಿ ಬಿಸಿಸಿಐನಲ್ಲಿ ನಡೆದ ಮಹತ್ವದ ಆಂತರಿಕ ಬದಲಾವಣೆಯಲ್ಲಿ ಗಂಗೂಲಿ ಅಧ್ಯಕ್ಷರಾಗಿ ಮುಂದುವರಿಯುವುದಕ್ಕೆ ಸಹಮತ ವ್ಯಕ್ತವಾಗಿರಲಿಲ್ಲ. ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಬಿಸಿಸಿಐ ಗಂಗೂಲಿ ಅವರನ್ನು ನಾಮನಿರ್ದೇಶನ ಮಾಡಬಹುದು ಎಂದು ಹೇಳಲಾಗಿತ್ತಾದರೂ ಅದು ಕೂಡ ಸಾಧ್ಯವಾಗಿರಲಿಲ್ಲ.

ಅಕ್ಟೋಬರ್‌ 18ರಂದು ಬಿಸಿಸಿಐ 91ನೇ ವಾರ್ಷಿಕ ಸಾಮಾನ್ಯ ಸಭೆ ಮುಂಬೈನಲ್ಲಿ ನಡೆಯಲಿದೆ. ಸಭೆಯಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಜರ್ ಮೈಕಲ್ ಬಿನ್ನಿ, ಬಿಸಿಸಿಐ ಮುಂದಿನ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ಕಾರ್ಯದರ್ಶಿಯಾಗಿ ಜಯ್‌ ಶಾ ಮತ್ತು ಉಪಾಧ್ಯಕ್ಷರಾಗಿ ರಾಜೀವ್ ಶುಕ್ಲಾ ಮುಂದುವರಿಯಲಿದ್ದಾರೆ. 2019 ರಲ್ಲಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಆಶಿಶ್ ಶೆಲಾರ್ ಖಜಾಂಚಿಯಾಗಿ ಮತ್ತು ಅಸ್ಸಾಂ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಜಂಟಿ ಕಾರ್ಯದರ್ಶಿಯಾಗಿ ನೇಮಕವಾಗಲಿದ್ದಾರೆ.

ಒಟ್ಟು 38 ಕ್ರಿಕೆಟ್ ಸಂಸ್ಥೆಗಳ ಪ್ರತಿನಿಧಿಗಳು ಮತ ಚಲಾಯಿಸಲಿದ್ದು, ಸಭೆಯಲ್ಲಿ ಸೌರವ್‌ ಗಂಗೂಲಿ ಬಂಗಾಳ ಕ್ರಿಕೆಟ್‌ ಸಂಸ್ಥೆಯನ್ನು ಪ್ರತಿನಿಧಿಸಲಿದ್ದಾರೆ.



Join Whatsapp