ತೆಲಂಗಾಣದ ಅರ್ಚಕ, ಪುತ್ರನ ಜೋಡಿ ಕೊಲೆಯ ಹಿಂದೆ ಮಾಟಮಂತ್ರ ಶಂಕೆ

Prasthutha|

ಹೈದರಾಬಾದ್: ಕಳೆದ ಕೆಲವು ದಿನಗಳ ಹಿಂದೆ ರಾಜ್ಯದಲ್ಲಿ ನಡೆದಿದ್ದ 75 ವರ್ಷದ ಅರ್ಚಕ ಹಾಗೂ ಆತನ ಮಗನ ಸಾವಿಗೆ ಮಾಟಮಂತ್ರ ಕಾರಣವಾಗಿದ್ದನ್ನು ಪತ್ತೆ ಹಚ್ಚಿರುವ ರಾಚಕೊಂಡ ಪೊಲೀಸರು ಈ ಸಂಬಂಧ ಐವರನ್ನು ಬಂಧಿಸಿದ್ದಾರೆ.

- Advertisement -

ಪೊಲೀಸ್ ಇನ್ಸ್ ಪೆಕ್ಟರ್ ಕೆಲಸಕ್ಕಾಗಿ ಮಾಟಮಂತ್ರದ ಮೊರೆ ಹೋಗಿದ್ದ ವಿನಯ್ ಎಂಬಾತ ಕೆಲಸ ಸಿಗದಿದ್ದಾಗ ತನ್ನ ಹಣ ಹಿಂದಿರುಗಿಸುವಂತೆ ಮೃತ ಅರ್ಚಕ ನರಸಿಂಹ ಬಳಿ ಗಲಾಟೆ ಮಾಡಿದ್ದ.

ಹಣ ಕೊಡದಿದ್ದಾಗ ಸ್ನೇಹಿತರ ಜೊತೆ ಸೇರಿ ತಂದೆ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ್ದು ಪ್ರಕರಣ ದಾಖಲಿಸಿ ರಾಚಕೊಂಡ ಪೊಲೀಸರು ಕಾರ್ಯಾಚರಣೆ ಕೈಗೊಂಡು  ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

ಮೃತ ಅರ್ಚಕ ನರಸಿಂಹನಿಗೆ ಆರೋಪಿ ವಿನಯ್ ಬಹಳ ದಿನಗಳಿಂದ ಪರಿಚಿತನಾಗಿದ್ದ. ಆರೋಪಿ ವಿನಯ್ ಮೂಢ ಆಚರಣೆಗಳಲ್ಲಿ ನಂಬಿಕೆ ಇದ್ದಂತಹ ವ್ಯಕ್ತಿ. ಅರ್ಚಕರು ಪೂಜೆ ಮಾಡಿದರೆ ತನಗೆ ಒಳ್ಳೆದಾಗಲಿದೆ ಎನ್ನುವ ಮೂಢನಂಬಿಕೆ  ಹೊಂದಿದ್ದ  ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಆರೋಪಿ ವಿನಯ್ 2016ರಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆ ಬರೆದಿದ್ದ, ಮೃತ ಅರ್ಚಕ ಕೆಲಸ ಸಿಗಲು ಪೂಜೆ ಸಲ್ಲಿಸುವುದಾಗಿ ಹೇಳಿ ಆರೋಪಿಯಿಂದ ಆರು ಲಕ್ಷ ರೂ ಪಡೆದಿದ್ದ.

ಇದೇ ರೀತಿ ಮತ್ತೊಬ್ಬ ವ್ಯಕ್ತಿಗೆ ಸುಮಾರು 12.50 ಲಕ್ಷ ರೂ ನೀಡಲು ಹೇಳಿದ್ದ. ಆದರೆ, ಆರೋಪಿಗೆ ಕೆಲಸ ಸಿಗದ ಕಾರಣ ಆತ ತಾನು ನೀಡಿದ್ದ 12.50 ಲಕ್ಷ ರೂ.ಗಳನ್ನು ಹಿಂದಿರುಗಿಸುವಂತೆ ಒತ್ತಡ ಹಾಕಿದ್ದಾನೆ. 12ಲಕ್ಷ ಪಡೆದಿದ್ದ ವ್ಯಕ್ತಿ 10 ಲಕ್ಷ ರೂ.ಗಳನ್ನು ಹಿಂದಿರುಗಿಸಿ ಬಳಿಕ 2.50 ಲಕ್ಷ ರೂ.ಗೆ ಚೆಕ್ ನೀಡಿದ್ದಾನೆ. ಆದರೆ ಅರ್ಚಕರಿಗೆ ಆರು ಲಕ್ಷ ರೂ ಹಿಂದಿರುಗಿಸಲು ಸಾಧ್ಯವಾಗಿಲ್ಲ.

ಬಳಿಕ ಆರೋಪಿ ವಿನಯ್ ತನ್ನ ವೈಯಕ್ತಿಕ ಜೀವನದಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ. ಮತ್ತು ಅವುಗಳನ್ನು ನಿವಾರಿಸಲು ಅರ್ಚಕನಿಗೆ ಪೂಜೆ ಮಾಡಲು ಅನೇಕ ಬಾರಿ ಹಣವನ್ನು ನೀಡಿದ್ದ. 2021ರ ಮಾರ್ಚ್ ತಿಂಗಳಲ್ಲಿ ಆರೋಪಿಯು ತನ್ನ ಆರು ಲಕ್ಷ ರೂಗಳನ್ನು ಹಿಂದಿರುಗಿಸುವಂತೆ ಅರ್ಚಕನ ಮೇಲೆ ಒತ್ತಡ ಹೇರಿದ್ದಾನೆ. ಆದರೆ ಅರ್ಚಕ ಆರೋಪಿ ಕಾಟದಿಂದ ತಪ್ಪಿಸಿಕೊಳ್ಳಲು ಅವನಿಂದ ದೂರವಾಗಿದ್ದಾರೆ.

ಇಷ್ಟೆಲ್ಲಾ ಆದ ಬಳಿಕ ಆರೋಪಿ ವಿನಯ್ ತನಗೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಆರ್ಥಿಕ ನಷ್ಟ ಸಂಭವಿಸುತ್ತಿದೆ. “ಪ್ರತಿ ಹುಣ್ಣಿಮೆಯ ದಿನ ಕೆಟ್ಟ ಅನುಭವಗಳಾಗುತ್ತಿವೆ ” ಎಂದು ತನ್ನ ಮನಸ್ಸಿನಲ್ಲಿ ಬಲವಾದ ಭಾವನೆಯನ್ನು ಬೆಳೆಸಿಕೊಂಡಿದ್ದ. ಇದಕ್ಕೆ ಅರ್ಚಕರೇ ಕಾರಣ ಇರಬೇಕು. ಹಣ ಕೊಡಬೇಕಾಗುತ್ತೆ ಎಂದು ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ದಾರೆ ಎಂದು ಕೊಂಡ ಆರೋಪಿ ಅ. 14 ರಂದು ತನ್ನ ಸ್ನೇಹಿತರೊಂದಿಗೆ ಅರ್ಚಕರ ನಿವಾಸಕ್ಕೆ ನುಗ್ಗಿ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಅರ್ಚಕ ಮತ್ತು ಆತನ ಮಗ ಮೃತಪಟ್ಟಿದ್ದಾರೆ. ಸದ್ಯ ಪೊಲೀಸರು ಪ್ರಕರಣ ಭೇದಿಸಿದ್ದು ಆರೋಪಿ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ.



Join Whatsapp