ರಾಮನಗರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತ ತಡೆಗೆ ಹೆದ್ದಾರಿ ಪ್ರಾಧಿಕಾರ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಶೀಘ್ರದಲ್ಲೇ ದ್ವಿಚಕ್ರ, ತ್ರಿಚಕ್ರ ಸೇರಿ ಕೆಲ ವಾಹನಗಳಿಗೆ ನಿಷೇಧ ಹೇರುವ ಕುರಿತು ತೀರ್ಮಾನ ಮಾಡಲಾಗಿದ್ದು, ಬೈಕ್, ಆಟೋ, ಟ್ರ್ಯಾಕ್ಟರ್ ಹಾಗೂ ಇತರ ಸಣ್ಣ ವಾಹನಗಳಿಗೆ ನಿರ್ಬಂಧ ಹೇರಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಈ ಸಂಬಂಧ ಜುಲೈ 12ರಂದು ರಾಷ್ಟ್ರೀಯ ಹೆದ್ದಾರಿ ನಿಯಂತ್ರಣ ಕಾಯ್ದೆ 2002ರ ಅನ್ವಯ ಹೆದ್ದಾರಿ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ. ಅಲ್ಲದೇ ದಶಪಥ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ವೇಗಮಿತಿ ನಿಗದಿ ಮಾಡಲಾಗಿದ್ದು ಗಂಟೆಗೆ 80 ರಿಂದ 100 ಕಿ.ಮೀಗೆ ಮಿತಿ ಹೇರಿರುವ ಕುರಿತು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಹೆದ್ದಾರಿಯಲ್ಲಿ ಅಪಘಾತ ಪ್ರಕರಣಗಳು ಹೆಚ್ಚಳ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ.
ಯಾವೆಲ್ಲಾ ವಾಹನಗಳಿಗೆ ನಿರ್ಬಂಧ?
– ಮೋಟರ್ ಸೈಕಲ್ (ಸ್ಕೂಟರ್ ಮತ್ತು ಇತರೆ ದ್ವಿಚಕ್ರವಾಹನ)
– ತ್ರಿಚಕ್ರವಾಹನ (ಆಟೋ ರಿಕ್ಷಾ, ಇ-ಕಾರ್ಟ್ ವಾಹನಗಳು)
– ಮೋಟಾರು ರಹಿತ ವಾಹನಗಳು, ಸೈಕಲ್‌ಗಳು
– ಟ್ರಾಕ್ಟರ್‌ಗಳು, ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ಟ್ರೇಲರ್ ವಾಹನಗಳು