ಅಕ್ಟೋಬರ್ 6ರಂದು ಭಾರತ್ ಜೋಡೋ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿರುವ ಸೋನಿಯಾ ಗಾಂಧಿ

Prasthutha|

ಮೈಸೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅಕ್ಟೋಬರ್ 6 ರಂದು ಬೆಳಗ್ಗೆ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ರಾಹುಲ್ ಗಾಂಧಿ ಅವರು ತಾಯಿ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಹಾಗೂ ಆಶೀರ್ವಾದ ಪಡೆದರು. ನಂತರ ಪಾದಯಾತ್ರೆ ಆರಂಭಿಸಿದ್ದಾರೆ. ಈಗ ಆಗಮಿಸಿರುವ ಸೋನಿಯಾ ಗಾಂಧಿ ಅವರಿಗೆ ಮೈಸೂರು ಹಾಗೂ ಕೊಡಗಿನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ಕೊಡಗು ಜಿಲ್ಲಾ ಅಧ್ಯಕ್ಷರು ಹಾಗೂ ಇತರೆ 15 ನಾಯಕರಿಗೆ ಅವರನ್ನು ಸ್ವಾಗತಿಸುವ ಜವಾಬ್ದಾರಿ ನೀಡಿದ್ದು, ಅವರ ಹೊರತಾಗಿ ಬೇರೆ ಯಾರೂ ಕೂಡ ಭೇಟಿ ಮಾಡಲು ಹೋಗಿ ತೊಂದರೆ ನೀಡಬಾರದು ಎಂದು ಮೈಸೂರು ಹಾಗೂ ಕೊಡಗಿನ ನಾಯಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಸೋನಿಯಾ ಗಾಂಧಿ ಅವರು 6 ರಂದು ಬೆಳಗ್ಗೆ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು 5 ರಂದು ರಾತ್ರಿ ಹಾಗೂ 6 ರಂದು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಇದು ಅಧಿಕೃತ ಕಾರ್ಯಕ್ರಮ. ಯಾರೊಬ್ಬರಿಗೂ ಹೂವಿನ ಹಾರ ಹಾಕುವ ಅವಕಾಶ ನೀಡುವುದಿಲ್ಲ. ಎಲ್ಲ ಕಾರ್ಯಕರ್ತರು ಹಾಗೂ ನಾಯಕರು ಸಹಕಾರ ನೀಡಬೇಕು ಎಂದರು.

- Advertisement -

ಕಳೆದ ಮೂರು ದಿನಗಳಿಂದ ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲ ಪಕ್ಷಭೇದ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಯಾತ್ರೆಯಲ್ಲಿ ಭಾಗವಹಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಸಿಕ್ಕಿದ್ದು ನಮಗೆ ಸಂತೋಷವಾಗಿದೆ. ಇದರ ಜತೆಗೆ ಸುತ್ತೂರು ಮಠಕ್ಕೆ ಹೋಗಿದ್ದು, ಶ್ರೀಗಳು ತುಂಬು  ಹೃದಯದ ಆಶೀರ್ವಾದ ಮಾಡಿದ್ದಾರೆ.  ಇಂದು ಚರ್ಚ್ ಹಾಗೂ ದರ್ಗಾಕ್ಕೂ ಭೇಟಿ ನೀಡಿದ್ದೇವೆ ಎಂದು ಡಿಕೆಶಿ ಹೇಳಿದರು.

ಮಡಿಕೇರಿಯಲ್ಲಿ ಕಾರ್ಯಕ್ರಮ ಇದೆಯೇ ಎಂಬ ಪ್ರಶ್ನೆಗೆ, ‘ದಸರಾ ಹಬ್ಬದ ಹಿನ್ನೆಲೆಯಲ್ಲಿ ಪಾದಯಾತ್ರೆಗೆ ಎರಡು ದಿನಗಳ ವಿಶ್ರಾಂತಿ ಇದೆ. ಅವರು ದೆಹಲಿಗೆ ಹೋಗುವ ಬದಲು ಇಲ್ಲೇ ಕುಟುಂಬದ ಜತೆ ಸಮಯ ಕಳೆಯಲು ಮಡಿಕೇರಿಯಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ’ ಎಂದರು.

ರಾಜ್ಯದ ಯಾತ್ರೆ ಎರಡು ಜಿಲ್ಲೆ ಪೂರ್ಣಗೊಳಿಸಿ ಮೂರನೇ ಜಿಲ್ಲೆಗೆ ಸಾಗುತ್ತಿದ್ದು, ಜನರ ಪ್ರತಿಕ್ರಿಯೆ ಬಗ್ಗೆ ಕೇಳಿದಾಗ, ‘ಯುವಕರು ಹಾಗೂ ರೈತರು ರಾಜ್ಯ ಹಾಗೂ ರಾಷ್ಟ್ರದಲ್ಲಿ ಬದಲಾವಣೆ ಬಯಸುತ್ತಿದ್ದು, ಅವರಲ್ಲಿನ ಉತ್ಸಾಹಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಯುವಕರು ಹಾಗೂ ರೈತರು ತಮಗಾಗುತ್ತಿರುವ ನೋವು, ತೊಂದರೆಯಿಂದ ರೊಚ್ಚಿಗೆದ್ದು ಈ ಯಾತ್ರೆಯಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದಾರೆ. ನಿತ್ಯ ಬೆಲೆ ಏರಿಕೆಯಿಂದ ಆಗುತ್ತಿರುವ ತೊಂದರೆ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ’ ಎಂದು ತಿಳಿಸಿದರು.

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಪಕ್ಷಕ್ಕೆ ಅನುಕೂಲವಾಗುತ್ತಿದೆಯಾ ಎಂದು ಕೇಳಿದ ಪ್ರಶ್ನೆಗೆ, ‘ಯೋಗಕ್ಕಿಂತ ಯೋಗಕ್ಷೇಮ ದೊಡ್ಡದು. ಆಪರೇಷನ್ ಕಮಲದಿಂದ ಅಧಿಕಾರಕ್ಕೆ ಬಂದ ಅವರು ಜನರಿಗೆ ಸಹಾಯ ಮಾಡುವ ಅವಕಾಶ ಇತ್ತು. ಕೋವಿಡ್ ಸಮಯದಲ್ಲಿ 20 ಲಕ್ಷ ಕೋಟಿ ಕೊಡುತ್ತೇವೆ ಎಂದು ಕೇಂದ್ರ ಹಾಗೂ 1900 ಕೋಟಿ ನೀಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದರು. ಅವಕಾಶ ಇದ್ದಾಗ ಅವರಿಂದ ಏನೂ ಮಾಡಲು ಆಗಲಿಲ್ಲ. ಈಗ ಅವರು ಹತಾಶರಾಗಿದ್ದಾರೆ. ಇನ್ನು ಆರುತಿಂಗಳು ಅವರು ನೆಮ್ಮದಿಯಾಗಿ ಇರಲಿ, ನಂತರ ನಾವು ಹಾಗೂ ಮಾಧ್ಯಮಗಳು ಜನ ರಾಜ್ಯದ ಹಿತ ಕಾಯೋಣ’ ಎಂದರು.

ಯಾತ್ರೆ ಬಗ್ಗೆ ಬಿಜೆಪಿ ಟೀಕೆ ಕುರಿತು ಕೇಳಿದ ಪ್ರಶ್ನೆಗೆ, ‘ಸೂರ್ಯ ಮುಳುಗುತ್ತಾನೆ, ಮತ್ತೆ ಹುಟ್ಟುತ್ತಾನೆ. ನಿನ್ನೆ ಅಷ್ಟು ದೊಡ್ಡ ಮಳೆ ಮಳೆ ಬಂದರೂ ರಾಹುಲ್ ಗಾಂಧಿ ಕಾರ್ಯಕ್ರಮ ನಿಲ್ಲಿಸಿದರಾ? ಎಷ್ಟೇ, ಮಳೆ ಗಾಳಿ, ಚಳಿ ಬಂದರೂ ಆ ವೇಗವನ್ನು ತಡೆಯಲು ಆಗುವುದಿಲ್ಲ. ನಾವು ದೇಶದ ಐಕ್ಯತೆಯಾಗಿ ಎಷ್ಟೇ ಕಷ್ಟ ಬಂದರೂ ಹೆಜ್ಜೆ ಹಾಕುತ್ತೇವೆ’ ಎಂದರು.

Join Whatsapp