ಉಡುಪಿ: ಮಹಿಳೆಯರ ವಿವಾಹ ವಯಸ್ಸು 21ಕ್ಕೇರಿಸಿದರೆ ಹಿಂದೂಗಳಿಗೆ ಅನ್ಯಾಯವಾಗಲಿದೆ ಎಂದು ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಶ್ವರ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.
ಕೃಷ್ಣ ಮಠದಲ್ಲಿ ಪರ್ಯಾಯ ಅದಮಾರು ಮಠದ ಪರ್ಯಾಯ ಮಂಗಲೋತ್ಸವ ‘ವಿಶ್ವಾರ್ಪಣಂ’ ಸಮಾರಂಭದಲ್ಲಿ ಮಾತನಾಡಿದ ಅವರು, ಮಹಿಳೆಯರ ಕನಿಷ್ಠ ವಿವಾಹದ ವಯಸ್ಸನ್ನು 21ಕ್ಕೆ ಏರಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಹಿಂದೂಗಳಿಗೆ ಅನ್ಯಾಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಮುಸ್ಲಿಮರಿಗೆ ಹಾಗೂ ಕ್ರೈಸ್ತರಿಗೆ ವಿವಾಹದ ಕಾನೂನುಗಳು ಬೇರೆಯಿದ್ದು, ಹಿಂದೂಗಳಿಗೆ ಮಾತ್ರ ವಿವಾಹದ ಕನಿಷ್ಠ ವಯಸ್ಸನ್ನು ಏರಿಕೆ ಮಾಡಲು ಹೊರಟಿರುವುದು ಸರಿಯಲ್ಲ. ಕೇಂದ್ರ ಸರ್ಕಾರ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಮುಸ್ಲಿಮರ ವಿವಾಹದ ವಯಸ್ಸು ಕಡಿಮೆಯಿರುವುದರಿಂದ ಜನಸಂಖ್ಯಾ ಏರಿಕೆ ದರ ಹೆಚ್ಚಾಗಿದೆ. ಪ್ರತಿಯಾಗಿ, ಹಿಂದೂಗಳ ಜನಸಂಖ್ಯಾ ಏರಿಕೆ ದರ ಕಡಿಮೆಯಿದ್ದು, ಹಿಂದೂಸ್ತಾನದಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗುವ ಅಪಾಯವಿದೆ. ಹಿಂದೂಗಳಿಗೆ ಅನ್ಯಾಯವಾಗುವುದನ್ನು ತಡೆಯಲು ಗಂಭೀರ ಚಿಂತನೆ ನಡೆಯಬೇಕು ಎಂದರು.
ವಿವಾಹದ ವಯಸ್ಸು ಏರಿಕೆಯಿಂದ ತಡವಾಗಿ ವಿವಾಹಗಳು ನಡೆಯಲಿದ್ದು ವಿಚ್ಛೇದನಗಳು ಹೆಚ್ಚಾಗಲಿವೆ, ಕುಟುಂಬ ವ್ಯವಸ್ಥೆ ಶಿಥಿಲವಾಗುತ್ತವೆ. ಬಾಲ್ಯವಿವಾಹಕ್ಕೆ ಶಾಸ್ತ್ರಗಳಲ್ಲಿಯೂ ವಿರೋಧವಿದ್ದು, ಮದುವೆಗೆ 18 ಸೂಕ್ತ ವಯಸ್ಸು ಎಂದು ಸ್ವಾಮೀಜಿ ತಿಳಿಸಿದರು.