ಮುಂಬೈ: ಆಗಸ್ಟ್ 23ರಂದು ನಿಧನರಾದ ಬಿಜೆಪಿ ನಾಯಕಿ ಹಾಗೂ ನಟಿ ಸೋನಾಲಿ ಫೋಗಟ್ ಅವರಿಗೆ ಪಬ್ ನಲ್ಲಿ ಬಲವಂತವಾಗಿ ಮದ್ಯ ಕುಡಿಸುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಗೋವಾದಲ್ಲಿ ನಡೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆಕೆಗೆ ಬಲವಂತವಾಗಿ ಮದ್ಯ ಕುಡಿಸುತ್ತಿರುವ ವ್ಯಕ್ತಿ ಸುಧೀರ್ ಸಾಂಗ್ವಾನ್ ಎಂಬುದು ತಿಳಿದುಬಂದಿದೆ.
ಈ ನಡುವೆ ಹರಿಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಶನಿವಾರ, ಸೋನಾಲಿ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು. ಭೇಟಿಯ ಬಳಿಕ ಬಿಜೆಪಿ ನಾಯಕಿಯ ಸಾವಿನ ಬಗ್ಗೆ ಕೇಂದ್ರೀಯ ತನಿಖಾ ದಳದಿಂದ(ಸಿಬಿಐ) ತನಿಖೆ ನಡೆಸುವಂತೆ ಗೋವಾ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಸೋನಾಲಿ ಫೋಗಟ್ ಹತ್ಯೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಗೋವಾದ ನ್ಯಾಯಾಲಯ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.