ಮುಂಬೈ: ಬಾಲಿವುಡ್ ನಟ ಹಾಗೂ ಸಂಸದ ಶತ್ರುಘ್ನ ಸಿನ್ಹಾ ಮತ್ತು ಪೂನಂ ಸಿಂಗ್ ತಮ್ಮ ಪುತ್ರಿ ಸೋನಾಕ್ಷಿ ಸಿನ್ಹಾ ಮತ್ತು ನಟ ಜಹೀರ್ ಇಕ್ಬಾಲ್ ಅವರ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಈ ಅಂತರ್ಧರ್ಮೀಯ ವಿವಾಹದ ಬಗ್ಗೆ ಮೊದಲು ಉದ್ವಿಗ್ನತೆ ಇತ್ತು. ಆದರೆ ಈಗ ಎಲ್ಲವೂ ಸರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಸೋನಾಕ್ಷಿಗೆ ತನ್ನ ಸಂಗಾತಿಯನ್ನು ಆಯ್ಕೆ ಮಾಡುವ ಎಲ್ಲ ಹಕ್ಕಿದೆ ಮತ್ತು ಆಕೆಯ ನಿರ್ಧಾರವನ್ನು ತಾನು ಬೆಂಬಲಿಸುತ್ತೇನೆ ಎಂದು ಶತ್ರುಘ್ನ ಹೇಳಿದ್ದಾರೆ. ತಮ್ಮ ಮಗಳ ಭಾವಿ ಪತಿ ಬಗ್ಗೆ ಪ್ರತಿಕ್ರಿಯಿಸಿದ ಶತ್ರುಘ್ನ, ‘ಸೋನಾಕ್ಷಿ ಮತ್ತು ಜಹೀರ್ ಒಟ್ಟಿಗೆ ತಮ್ಮ ಜೀವನವನ್ನು ನಡೆಸಬೇಕಾಗುತ್ತದೆ. ಅವರು ಒಟ್ಟಿಗೆ ಉತ್ತಮವಾಗಿ ಕಾಣುತ್ತಾರೆ’ ಎಂದು ಹೇಳಿದ್ದಾರೆ.
ಜೂನ್ 23 ರಂದು ನಮ್ಮ ಕುಟುಂಬ ಸದಸ್ಯರೆಲ್ಲರೂ ಆರತಕ್ಷತೆಯಲ್ಲಿ ಪಾಲ್ಗೊಳ್ಳುತ್ತಾರೆ. ಎಲ್ಲರ ಮನೆಯಲ್ಲೂ ಮದುವೆ ನಡೆಯುತ್ತದೆ. ಮದುವೆಗೂ ಮುನ್ನ ಜಗಳಗಳು ಸಹ ಸಾಮಾನ್ಯ. ಈಗ ಎಲ್ಲವೂ ಸರಿಯಾಗಿದೆ. ಏನೆಲ್ಲಾ ಟೆನ್ಶನ್ ಇತ್ತೋ ಅದೆಲ್ಲ ಹೋಗಿದೆ. ಇದೆಲ್ಲವೂ ಪ್ರತಿ ಮದುವೆಯಲ್ಲಿ ನಡೆಯುತ್ತದೆ ಎಂದಿದ್ದಾರೆ.
ಈ ಹಿಂದೆ ಬಾಲಿವುಡ್ ನಟ ಮತ್ತು ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ತಮ್ಮ ಏಕೈಕ ಪುತ್ರಿ ಸೋನಾಕ್ಷಿ ಸಿನ್ಹಾ ಅವರ ಅಂತರ್ಧರ್ಮೀಯ ವಿವಾಹದ ಕುರಿತಂತೆ ಅಸಮಾಧಾನಗೊಂಡಿರುವುದು ಸುದ್ದಿಯಾಗಿತ್ತು. ತನ್ನ ಮಗಳ ಮದುವೆಯ ಬಗ್ಗೆ ತನಗೆ ತಿಳಿದಿಲ್ಲ ಎಂದು ನಟ ಹೇಳಿ ಅಚ್ಚರಿ ಮೂಡಿಸಿದ್ದರು.