ತಾಯಿಯ ಚಿತಾಭಸ್ಮ ವಿಸರ್ಜನೆಗೆ ತೆರಳಿದ್ದ ಮಗ ನೀರುಪಾಲು

Prasthutha|

ವಿಜಯನಗರ: ಮೂರು ದಿನಗಳ ಹಿಂದೆ ಮೃತಪಟ್ಟಿದ್ದ ತಾಯಿಯ ಚಿತಾಭಸ್ಮ ವಿಸರ್ಜಿಸಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಇಟಗಿ ಗ್ರಾಮದಲ್ಲಿ ನಡೆದಿದೆ.

- Advertisement -

ಎಚ್.ಜಿ. ಕೊಟ್ರೇಶ್ (40) ಮೃತ ಯುವಕ. ತಾಯಿಯ ಚಿತಾಭಸ್ಮ ನೀರಿಗೆ ಬಿಡಲು ಕೊಟ್ರೇಶ್ ಬುಧವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ರಸ್ತೆಯಲ್ಲಿರುವ ಮಳೆಹಳ್ಳದಲ್ಲಿರುವ ಚೆಕ್ ಡ್ಯಾಂಗೆ ತೆರಳಿದ್ದಾಗ ಅಯತಪ್ಪಿ ನೀರಿಗೆ ಬಿದ್ದಿದ್ದಾರೆ.

ಸಂಜೆಯಾದರೂ ಕೊಟ್ರೇಶ್ ಮನೆಗೆ ಬಾರದಿದ್ದಾಗ ಕುಟುಂಬದ ಸದಸ್ಯರು ಹುಡುಕಾಟ ನಡೆಸಿದ್ದಾರೆ. ಗ್ರಾಮದ ಹೊರವಲಯದಲ್ಲಿರುವ ಚೆಕ್ ಡ್ಯಾಂ ಬಳಿ ಗುರುವಾರ ಬೆಳಿಗ್ಗೆ ಬೈಕ್‌, ಚಪ್ಪಲಿ ಪತ್ತೆಯಾಗಿದ್ದರಿಂದ ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿತ್ತು. ಮಾಹಿತಿ ಪಡೆದು ಸ್ಥಳಕ್ಕೆ ದೌಡಾಯಿಸಿ ಬಂದ ಪೊಲೀಸರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಚೆಕ್ ಡ್ಯಾಂ ನಲ್ಲಿ ಶೋಧ ನಡೆಸಿದಾಗ ಶವ ಪತ್ತೆಯಾಗಿದೆ.

- Advertisement -

ಇಟ್ಟಿಗಿ ಠಾಣೆಯ ಪಿಎಸ್‌ಐ ವೀರೇಶ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚೆಕ್ ಡ್ಯಾಂನಲ್ಲಿ ಕೊಟ್ರೇಶ್ ಮೃತದೇಹ ಪತ್ತೆಯಾಗುತ್ತಿದ್ದಂತೆ ಕುಟುಂಬದ ಸದಸ್ಯರ ಆಕ್ರಂದನ ಮುಗಿಲುಮುಟ್ಟಿತ್ತು. ಘಟನೆಯ ಕುರಿತು ಹೂವಿನಹಡಗಲಿ ತಾಲೂಕಿನ ಇಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp