ಕೋಲ್ಕತಾ: ಪ್ರವಾದಿ ನಿಂದನೆ ವಿರುದ್ಧ ಶಾಂತಿಯುತವಾದ ಪ್ರತಿಭಟನೆಯು ವಿಕೋಪಕ್ಕೆ ತಿರುಗಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮತ್ತೆ ಘರ್ಷಣೆ ಸಂಭವಿಸಿದ್ದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ ಹಾಗೂ ಹಿಂಸಾಚಾರದ ಹಿಂದೆ ಕೆಲವು ರಾಜಕೀಯ ಪಕ್ಷಗಳು ಇವೆ ಎಂದು ಹೇಳಿದ್ದಾರೆ.
“ಬಿಜೆಪಿಯ ಪಾಪಕ್ಕೆ ಜನಸಾಮಾನ್ಯರು ಏಕೆ ತೊಂದರೆ ಅನುಭವಿಸಬೇಕು?” ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದರು.
“ಈಗಾಗಲೇ ಹೇಳಿರುವಂತೆ ಹೌಡಾ ಜಿಲ್ಲೆಯ ಕೆಲವು ಕಡೆ ಎರಡು ದಿನಗಳಿಂದ ಪ್ರತಿಭಟನೆಯು ಕೆಲವು ಕಡೆ ಹಿಂಸಾಚಾರಕ್ಕೆ ತಿರುಗಿದೆ. ಕೆಲವು ರಾಜಕೀಯ ಪಕ್ಷಗಳು ಉರಿಯುವ ಮನೆಯಲ್ಲಿ ಗಳ ಹಿರಿದುಕೊಳ್ಳುವಂತೆ ಪ್ರತಿಭಟನೆಯ ನಡುವೆ ಹಿಂಸೆ ಬಿತ್ತುತ್ತಿದ್ದಾರೆ. ಇದನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ಹಿಂಸೆಯಲ್ಲಿ ಪಾಲ್ಗೊಳ್ಳುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಪಾಪ ಮಾಡಿದ್ದು ಬಿಜೆಪಿ, ಜನರು ತೊಂದರೆಗೆ ಸಿಲುಕಿದ್ದಾರೆ.” ಎಂದು ಮಮತಾ ಬ್ಯಾನರ್ಜಿಯವರು ಟ್ವೀಟ್ ಮಾಡಿದ್ದಾರೆ.
ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾರ ಪ್ರವಾದಿವರ್ಯರ ಮೇಲಿನ ಕೆಟ್ಟ ವಿವಾದಾತ್ಮಕ ಹೇಳಿಕೆ ವಿರೋಧಿಸಿ ಹೌಡಾ ಜಿಲ್ಲೆಯ ಹಳ್ಳಿ ಪ್ರದೇಶಗಳಲ್ಲಿ ಸಹ ಪ್ರತಿಭಟನೆ ಆರಂಭವಾಗಿದೆ.
ಪ್ರತಿಭಟನಾಕಾರರು ಮತ್ತು ಪೋಲೀಸರ ನಡುವೆ ಹಲವು ಕಡೆ ಗಲಭೆ ಮೇಲೆದ್ದಿದೆ. ಕಲ್ಲು ಹೊಡೆಯುವವರನ್ನು ಪೋಲೀಸರು ತಡೆಯಲು ಯತ್ನಿಸಿದಾಗ ಹಲವು ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಪೋಲೀಸರ ವಾಹನಗಳು ಮತ್ತು ದಾರಿಹೋಕರ ಬೈಕ್ ಗಳೂ ಇದರಲ್ಲಿ ಸೇರಿವೆ.
ಹೌಡಾ ಜಿಲ್ಲೆಯ ಹಲವು ಕಡೆ ಪೋಲೀಸರು ಅಪರಾಧ ದಂಡ ಸಂಹಿತೆಯ 144ನೆಯ ವಿಧಿಯನ್ನು ಶುಕ್ರವಾರ ಸಂಜೆಯೇ ಜಾರಿಗೊಳಿಸಿದ್ದಾರೆ. ಹೌಡಾ ಜಿಲ್ಲೆಯ ಹಲವಾರು ಕಡೆ ಪಡುವಣ ಬಂಗಾಲ ಸರಕಾರವು ಅಂತರಜಾಲ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಅಂತರಜಾಲ ದುರುಪಯೋಗಿಸಿ ಹಿಂಸಾಚಾರ ಹರಡದಂತೆ ತಡೆಯುವುದು ಇದರ ಗುರಿ ಎಂದು ಸರಕಾರ ಹೇಳಿದೆ.