ಬಿಜೆಪಿ, ಆರ್ ಎಸ್ ಎಸ್ ಈ ದೇಶವನ್ನು ಎತ್ತ ಕೊಂಡೊಯ್ಯುತ್ತಿದೆ: SDPI ಬೃಹತ್ ಜನಾಧಿಕಾರ ಸಮಾವೇಶದಲ್ಲಿ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ

Prasthutha|

ಬೆಂಗಳೂರು : ಈ ದೇಶ ಎಲ್ಲರದ್ದಲ್ಲ ಎಂದು ಕೆಲವರು ಹೇಳುತ್ತಿದ್ದಾರೆ, ಹಾಗೆಯೇ ಹಿಂದೂ ರಾಷ್ಟ್ರದ ಸಂವಿಧಾನ ಸಿದ್ಧ ಪಡಿಸುತ್ತಿರುವುದಾಗಿಯೂ ಕೆಲವರು ಹೇಳಿಕೊಂಡಿದ್ದಾರೆ. ಇದು ದೇಶವನ್ನು ಎತ್ತ ಕೊಂಡೊಯ್ಯುತ್ತದೆ? ಎಂದು SDPI ಪಕ್ಷದ ರಾಷ್ಟ್ರೀಯ ಅಧ್ಯಕ ಎಂ.ಕೆ. ಫೈಝಿ ಪ್ರಶ್ನೆ ಮಾಡಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಪಕ್ಷದ ವತಿಯಿಂದ ನಡೆದ 5ನೇ ಬೃಹತ್ ಜನಾದೇಶ ಸಮಾವೇಶದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ 2002 ಗುಜರಾತ್ ನರಮೇಧ ಸಂದರ್ಭದಲ್ಲಿ ನಡೆದ ಗರ್ಭಿಣಿ ಬಿಲ್ಕಿಸ್ ಬಾನೋ ಅತ್ಯಾಚಾರ ಮತ್ತು ಆಕೆಯ ಕುಟುಂಬದ 7 ಸದಸ್ಯರ ಕೊಲೆಯಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿಗಳನ್ನು ಗುಜರಾತ್ ಸರ್ಕಾರ ಕ್ಷಮಾಪಣೆ ನೀಡಿ ಜೈಲಿನಿಂದ ಬಿಡುಗಡೆ ಮಾಡಿರುವ ಬಗ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.

ತುಂಬಿ ಹೋಗಿದ್ದ ಲಿಂಗರಾಜಪುರದ ಚಾರ್ಲ್ಸ್ ಮೈದಾನದಲ್ಲಿನ ಈ ಸಮಾವೇಶದಲ್ಲಿ ಮಾತನಾಡಿದ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ , ಬಂಡವಾಳಶಾಹಿಗಳ 10 ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವ ಮೋದಿಯವರು ಸಾಮಾನ್ಯರಿಗೆ ನೀಡುವ ಸೀಮೆಎಣ್ಣೆ, ಅಕ್ಕಿಯ ಮೇಲಿನ ಸಬ್ಸಿಡಿ ಬಗ್ಗೆ ಲೇವಡಿ ಮಾಡುತ್ತಾರೆ ಎಂದರು.

- Advertisement -

ಜೊತೆಗೆ ರಾಜ್ಯದ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಪಕ್ಷಗಳು ಬಿಜೆಪಿಯನ್ನು ತೋರಿಸಿ ಅಲ್ಪಸಂಖ್ಯಾತರ ಮತ ಪಡೆಯುತ್ತಾರೆ. ಆದರೆ ಸಮುದಾಯದ ಸಮಸ್ಯೆಗಳ ಬಗ್ಗೆ ಚಕಾರ ಎತ್ತುವುದಿಲ್ಲ . ಜೊತೆಗೆ ದಲಿತರದೂ ಇದೇ ಪರಿಸ್ಥಿತಿ ಎಂದು ಹೇಳಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಮಾತನಾಡಿ, SDPI ಒಂದು ಪರಿವರ್ತನಾ ಚಳುವಳಿ. ಅದಕ್ಕಾಗಿ ನಾವು ಯಾವ ತ್ಯಾಗಕ್ಕೂ ಸಿದ್ಧರಿರಬೇಕು ಎಂದು ಕರೆ ಕೊಟ್ಟರು.

ಸಮಾವೇಶದಲ್ಲಿ SDPI ಯ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ನಾಯಕರು ಮತ್ತು ಸಾವಿರಾರು ಸಂಖ್ಯೆಯಲ್ಲಿ ಬೃಹತ್ ಜನಸ್ತೋಮ ಪಾಲ್ಗೊಂಡಿತ್ತು. SDPI ಪಕ್ಷಕ್ಕೆ ಒಂದು ಅವಕಾಶ ಮಾಡಿ ಕೊಡುವ ಮೂಲಕ ದಲಿತರು ಮತ್ತು ಮುಸ್ಲಿಮರು ತಮ್ಮ ಹಕ್ಕಿನ ಅಧಿಕಾರವನ್ನು ಪಡೆಯಬೇಕು ಎಂದು ಈ ಸಮಾವೇಶದಲ್ಲಿ ಕರೆ ಕೊಡಲಾಯಿತು.

Join Whatsapp