ಸೊಮಾಲಿಯ: ಸೊಮಾಲಿಯಾ ರಾಜಧಾನಿ ಮೊಗಾದಿಶು ಎಂಬಲ್ಲಿ ಎರಡು ಕಾರುಗಳಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 100 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 300 ಮಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೊಮಾಲಿಯಾದ ಜನನಿಬಿಡ ಪ್ರದೇಶವಾದ ಸೋಬೆ ಜಂಕ್ಷನ್’ನಲ್ಲಿ ಸೊಮಾಲಿಯಾದ ಶಿಕ್ಷಣ ಸಚಿವಾಲಯ ಮತ್ತು ಶಾಲೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.
ಸದ್ಯ ಈ ದಾಳಿಗೆ ಅಲ್ ಶಹಾಬ್ ಸಶಸ್ತ್ರ ಗುಂಪು ಕಾರಣ ಎಂದು ಸೊಮಾಲಿಯಾದ ಅಧ್ಯಕ್ಷ ಹಸನ್ ಶೇಖ್ ಮುಹಮ್ಮದ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಅವಳಿ ಸ್ಫೋಟದಿಂದಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.
ಈ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಹಲವಾರು ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರ ಸಾದಿಕ್ ದೂದಿಶೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಘಟನೆಯಲ್ಲಿ ಪತ್ರಕರ್ತ ಮುಹಮ್ಮದ್ ಇಸ್ಸೆ ಕೋನಾ ಅವರು ಕೂಡ ಸಾವನ್ನಪ್ಪಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಸೊಮಾಲಿಯಾದ ಮೇಲೆ ನಡೆದ ಈ ದಾಳಿಯನ್ನು ಕೆಟ್ಟ ದಾಳಿ ಎಂದು ಬಣ್ಣಿಸಿದ ವಿಶ್ವಸಂಸ್ಥೆ, ಇದನ್ನು ಖಂಡಿಸಿದೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ಸಂತಾಪವನ್ನು ಸೂಚಿಸಿದೆ. ಅಲ್ಲದೆ ಟರ್ಕಿಯೂ ಕೂಡ ಈ ದಾಳಿಯನ್ನು ಖಂಡಿಸಿದರೆ, ಕತಾರ್ ಹಿಂಸಾಚಾರ ಮತ್ತು ಭಯೋತ್ಪಾದನೆಯನ್ನು ದೃಢವಾಗಿ ತಿರಸ್ಕರಿಸುತ್ತದೆ ಎಂದು ತಿಳಿಸಿದೆ.