ಚಿತ್ರದುರ್ಗ: ರಾಜ್ಯದ ಅಲೆಮಾರಿ ಹಾಗೂ ಅಲಕ್ಷಿತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಶ್ವಾಸನೆ ನೀಡಿದ್ದಾರೆ.
ಹಿರಿಯೂರು ತಾಲೂಕು ಪ್ರವೇಶಿಸಿದ ಯಾತ್ರೆಯ ಬಿಡುವಿನ ಸಮಯದಲ್ಲಿ ರಾಹುಲ್ ಗಾಂಧಿ, ಲಂಬಾಣಿ, ದಕ್ಕಲಿಗ, ಸುಡುಗಾಡು ಸಿದ್ದರು, ದೊಂಬಿದಾಸರು, ಕೊರಮರು, ಶಿಳ್ಳೆಕ್ಯಾತ ಹಾಗೂ ಹಂದಿಜೋಗಿ ಸಮುದಾಯದ 25ಕ್ಕೂ ಹೆಚ್ಚು ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ ಕುಂದುಕೊರತೆಗಳನ್ನು ಆಲಿಸಿದರು. ದೈನಂದಿನ ಜೀವನದ ಸ್ಥಿತಿ-ಗತಿ, ಪ್ರಸ್ತುತ ಸಮಾಜದಲ್ಲಿ ಅನುಭವಿಸುತ್ತಿರುವ ಕಷ್ಟ ನಷ್ಟಗಳ ಕುರಿತು ಸಮಾಲೋಚನೆ ನಡೆಸಿದರು.
‘ಅಲೆಮಾರಿ ಸಮುದಾಯಕ್ಕೆ ಪಡಿತರ ಚೀಟಿ ಹೊರತುಪಡಿಸಿ ಯಾವುದೇ ಸೌಲಭ್ಯ ಸಿಕ್ಕಿಲ್ಲ. ವಸತಿ, ಉದ್ಯೋಗ, ನಿವೇಶನ ಸೇರಿ ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಹುಳಿಯಾರು ಪಟ್ಟಣದ ಕೆರೆ ಅಂಗಳದಲ್ಲಿ ಹಾಕಿಕೊಂಟಿದ್ದ ಟೆಂಟ್ ಗಳು ಜಲಾವೃತವಾಗಿವೆ. ಶಾಶ್ವತ ವಸತಿ ಸೌಲಭ್ಯಕ್ಕೆ ಒತ್ತಾಯಿಸಿ ನಾಡಕಚೇರಿ ಎದುರು ನಡೆಸುತ್ತಿರುವ ಹೋರಾಟದ ಬಗ್ಗೆ ರಾಹುಲ್ ಗಾಂಧಿ ಅವರ ಗಮನಕ್ಕೆ ತಂದಿದ್ದೇವೆ ಎಂದು ಹಂದಿಜೋಗಿ ಸಮುದಾಯದ ಮುಖಂಡ ಹುಳಿಯಾರು ರಾಜಣ್ಣ ತಿಳಿಸಿದರು.
‘ಬ್ರಿಟಿಷರ ಕಾಲದಲ್ಲಿ ಲಂಬಾಣಿ ಸಮುದಾಯವನ್ನು ಘೋಷಿತ ‘ಅಪರಾಧಿ ಬುಡಕಟ್ಟು’ ಎಂಬುದಾಗಿ ಗುರುತಿಸಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಮೀಸಲಾತಿ ನೀಡಲಾಗುತ್ತಿದೆ. ಆದರೂ ಸಮುದಾಯ ಸಂಕಷ್ಟಗಳಿಂದ ಹೊರ ಬಂದಿಲ್ಲ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವುದರಿಂದ ಉದ್ಯೋಗ ಅರಸಿ ಗುಳೆ ಹೊಗುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾನಾಯ್ಕ್ ಮಾಹಿತಿ ನೀಡಿದರು.