ನವದೆಹಲಿ: ಭೂಕಬಳಿಕೆ ಪ್ರಕರಣದಲ್ಲಿ ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿದ್ದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ಗೆ ಸುಪ್ರೀಂ ಕೋರ್ಟ್ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದ ಬಳಿಕ ಶುಕ್ರವಾರ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.
ಖಾನ್ 88 ಪ್ರಕರಣಗಳಲ್ಲಿ ವಿಚಾರಣೆಯನ್ನು ಎದುರಿಸುತ್ತಿದ್ದು, ಫೆಬ್ರವರಿ 2020 ರಿಂದ ಬಂಧನದಲ್ಲಿದ್ದರು. ಇತರ 87 ಪ್ರಕರಣಗಳಲ್ಲಿ ಈಗಾಗಲೇ ಜಾಮೀನು ಪಡೆದಿರುವುದರಿಂದ ಸುಪ್ರೀಂ ಕೋರ್ಟ್, ಸಂವಿಧಾನದ 142ನೇ ವಿಧಿಯ ವಿಶೇಷ ಅಧಿಕಾರವನ್ನು ಬಳಸಿಕೊಂಡು ಅಜಂಖಾನ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ಬಿಡುಗಡೆಯ ನಂತರ ಅವರು ತಮ್ಮ ಹುಟ್ಟೂರಾದ ರಾಂಪುರಕ್ಕೆ ತೆರಳಿದರು.
ಗುರುವಾರ ರಾತ್ರಿ 11 ಗಂಟೆ ಸುಮಾರಿಗೆ ಬಿಡುಗಡೆ ಆದೇಶ ಜೈಲಿಗೆ ತಲುಪಿದ್ದು, ಎಲ್ಲಾ ಪ್ರಕ್ರಿಯೆಗಳ ನಂತರ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಅಜಂ ಖಾನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಸೀತಾಪುರ ಜೈಲಿನ ಜೈಲರ್ ಆರ್ ಎಸ್ ಯಾದವ್ ತಿಳಿಸಿದ್ದಾರೆ.