ಚಾಮರಾಜನಗರ: ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷ ಕಳೆದರೂ ಇನ್ನು ಸಹ ಜಾತಿ ಅಸ್ಪೃಶ್ಯತೆ, ಪಾಳೇಗಾರಿ ವ್ಯವಸ್ಥೆ, ಸಾಮಾಜಿಕ ಅಸಮಾನತೆ ಜಿವಂತವಾಗಿರುವುದು ನಾಗರಿಕ ಸಮಾಜಕ್ಕೆ ಕಳಂಕ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಆರೋಪಿಸಿದ್ದಾರೆ.
ಕೊಳ್ಳೇಗಾಲ ತಾಲ್ಲೂಕಿನ ಕುಣಗಳ್ಳಿ ಗ್ರಾಮದ ಗೋವಿಂದರಾಜ್ ಎಂಬ ಯುವಕ ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾದ ಎಂಬ ಕಾರಣಕ್ಕೆ ಆತನಿಗೆ ಸಾಮಜಿಕ ಬಹಿಷ್ಕಾರ ಹಾಕಿ ಆರು ಲಕ್ಷ ದಂಡ ವಿಧಿಸಲಾಗಿದೆ. ಇದು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿರುವ ಘಟನೆ ಎಂದರು.
ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿ ಮುಂದೆ ದಲಿತ ಹಕ್ಕುಗಳ ಸಮಿತಿ (ಡಿಎಚ್’ಎಸ್), ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ), ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿಆರ್’ಎಸ್) ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ನೌಕರರ ಸಂಘ(ಸಿಐಟಿಯು) ಹಮ್ಮಿಕೊಂಡಿದ್ದ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.
ಜಾತಿ ದೌರ್ಜನ್ಯ, ಅಸ್ಪೃಶ್ಯತಾ ಆಚರಣೆ, ಸಾಮಾಜಿಕ ಬಹಿಷ್ಕಾರಗಳು ಮೋದಿ ಅಧಿಕಾರಕ್ಕೆ ಬಂದ ನಂತರ ಅದರಲ್ಲೂ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಅವರಂಥ ಕೋಮುವಾದಿ ಕ್ರಿಮಿಗಳು ಅಧಿಕಾರಕ್ಕೆ ಬಂದ ಮೇಲೆ ಹೆಚ್ಚಾಗಿವೆ. ಉತ್ತರ ಪ್ರದೇಶದ ದುಷ್ಟ ಮಾದರಿ ವ್ಯಾಪಕವಾಗಿ ಹರಡುತ್ತಿರುವುದು ಅಪಾಯದ ಬೆಳವಣಿಗೆಯಾಗಿದೆ ಎಂದರು.
ದೇಶದಲ್ಲಿ ಮನುವಾದಿ – ಕೋಮುವಾದಿ ಬಿಜೆಪಿ ಅಧಿಕಾರದಲ್ಲಿ ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಇದಕ್ಕೆ ಈ ಘಟನೆಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ. ಕುಣಗಳ್ಳಿ ಗ್ರಾಮದ ಉಪ್ಪಾರ ಶೆಟ್ಟಿ ಮೇಲ್ಜಾತಿ ಹುಡುಗ ಗೋವಿಂದರಾಜ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೂವಿನ ಕೊಪ್ಪಲು ಗ್ರಾಮದ ದಲಿತ ಕುಟುಂಬದ ಶ್ವೇತರವರನ್ನು 2018ರ ಸೆಪ್ಟೆಂಬರ್ 18ರಂದು ಮಳವಳ್ಳಿ ನೊಂದಣಿ ಕಛೇರಿಯಲ್ಲಿ ಅಂತರಜಾತಿ ವಿವಾಹ ಮಾಡಿಕೊಂಡಿದ್ದರು. ಇದರಿಂದ ಕುಪಿತರಾದ ಕುಣಗಳ್ಳಿ ಜನರು ನಮಗೆ ಅವಮಾನ ಮಾಡಿ ಜಾತಿ ಕುಲ ಕೆಡಿಸಿದ್ದೀರಿ ನೀವು ಗ್ರಾಮಕ್ಕೆ ಬರಬಾರದು ಎಂದು ತಡೆ ಒಡ್ಡಿದರು. ಕೆಲವು ಊರಿನ ಜನರ ಮಧ್ಯಸ್ತಿಕೆಯಿಂದ ಸಮಸ್ಯೆ ಬಗೆಹರಿಸುವ ಭರವಸೆ ಸಿಕ್ಕಿದ್ದರಿಂದ 5 ವರ್ಷದಿಂದ ಮಳವಳ್ಳಿಯಲ್ಲಿ ಜೀವನ ಸಾಗಿಸಿದರು. ದಂಪತಿಗೆ ಎರಡು ಮಕ್ಕಳಾದರು ಸಹ ಕುಣಗಳ್ಳಿ ಗ್ರಾಮಕ್ಕೆ ಮಾತ್ರ ಪ್ರವೇಶ ನಿರ್ಬಂಧಿಸಲಾಗಿದೆ.
ಜಿಲ್ಲಾಧಿಕಾರಿಗಳು ಪ್ರತಿಭಟನಕಾರರ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ಮುಖಂಡ ಕೃಷ್ಣ, ಜನವಾದಿ ಮಹಿಳಾ ಸಂಘಟನೆಯ ಲತಾ, ಸುಶೀಲಾ, ಮಂಜುಳಾ, ಶೋಭ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಹಕಾರ್ಯದರ್ಶಿ ಎನ್ ಎಲ್ ಭರತ್ ರಾಜ್ ಲಿಂಗರಾಜಮೂರ್ತಿ, ಪ್ರಕಾಶ್, ಮಹಾದೇವು, ಸಿಪಿಐ(ಎಂ) ಮೈಸೂರು ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಗ್ರಾಮ ಪಂಚಾಯಿತಿ ನೌಕರರ ಸಂಘದ ಮುಖಂಡ ಬಸವರಾಜ್, ಸಿಪಿಐ(ಎಂ) ಮಂಡ್ಯ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ಮಂತಾದವರು ಭಾಗವಹಿಸಿದ್ದರು.