ಮಂಗಳೂರು | ಖಾಸಗಿ ಬಸ್ಸಿನಲ್ಲಿ ವಿಕೃತ ವ್ಯಕ್ತಿಯ ಕಿರುಕುಳ | ಯುವತಿಯ ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್

Prasthutha|

ಮಂಗಳೂರು : ನಗರದಲ್ಲಿ ಪ್ರಯಾಣಿಸುವಾಗ ಬಸ್ಸೊಂದರಲ್ಲಿ ವಿಕೃತ ಮನಸ್ಥಿತಿಯ ವ್ಯಕ್ತಿಯೊಬ್ಬ ತನ್ನ ಮೈ ಮುಟ್ಟಿ ಕಿರುಕುಳ ನೀಡಿದ್ದಲ್ಲದೆ, ಇದರ ಬಗ್ಗೆ ಬಸ್ಸಿನಲ್ಲಿದ್ದವರು, ಬಸ್ಸಿನ ಸಿಬ್ಬಂದಿ ಮೂಕಪ್ರೇಕ್ಷಕರಂತೆ ವರ್ತಿಸಿದ ಬಗ್ಗೆ ಯುವತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ವೈರಲ್ ಆಗಿದೆ.

- Advertisement -

ಯುವತಿಯ ಸೋಶಿಯಲ್ ಮೀಡಿಯಾ ಪೋಸ್ಟ್ ನಿಂದಾಗಿ, ಈಗ ಇಂತಹ ದುಷ್ಕರ್ಮಿಗಳ ವಿರುದ್ಧ ಮಹಿಳೆಯರು ಜಾಗೃತರಾಗುವ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಜ.14ರಂದು ದೇರಳಕಟ್ಟೆಯ ಕೆಎಸ್ ಹೆಗ್ಡೆ ಆಸ್ಪತ್ರೆಯ ಬಸ್ ನಿಲ್ದಾಣದಿಂದ ಖಾಸಗಿ ಬಸ್ ನಲ್ಲಿ ಮಂಗಳೂರಿನ ಪಂಪ್ ವೆಲ್ ಕಡೆಗೆ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಕಿರುಕುಳಕ್ಕೊಳಗಾದ ಯುವತಿ ಈ ಬಗ್ಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜ.14ರಂದು ಮಾಡಿರುವ ಈ ಪೋಸ್ಟ್ ಜ.15ರ ವೇಳೆಗೆ 43,000ಕ್ಕೂ ಹೆಚ್ಚು ಶೇರ್ ಆಗಿದ್ದು, 1,500ಕ್ಕೂ ಹೆಚ್ಚು ಕಮೆಂಟ್ ಮಾಡಲಾಗಿದೆ. ಯುವತಿಯ ಧೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

ಇಂಗ್ಲಿಷ್ ನಲ್ಲಿ ಬರೆದಿರುವ ಪತ್ರ ಹೀಗಿದೆ : “ಇಂದು (14-01-2021) ಮಧ್ಯಾಹ್ನ 3:45ರ ಸುಮಾರಿಗೆ ನಾನು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ನಿಲ್ದಾಣದಿಂದ ಮಂಗಳೂರಿನ ಪಂಪ್ ವೆಲ್ ಗೆಂದು ಮಹೇಶ್ ಬಸ್ಸಿನಲ್ಲಿ ಬರುತ್ತಿದ್ದೆ. ಈ ಚಿತ್ರದಲ್ಲಿರುವ ವ್ಯಕ್ತಿ ಕೆ.ಎಸ್. ಹೆಗ್ಡೆ ಬಸ್ ನಿಲ್ದಾಣದಲ್ಲಿ ಬಸ್ ಏರಿದ್ದು, ನನ್ನ ಹತ್ತಿರದ ಸೀಟಿನಲ್ಲಿ ಕುಳಿತಿದ್ದ. ಆದರೆ ಸೀಟಿನಲ್ಲಿ ಕುಳಿತು ಒಂದು ಕೈಯಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ಬ್ಯುಸಿ ಇರುವಂತೆ ನಟಿಸುತ್ತಿದ್ದ. ಮತ್ತೊಂದು ಕೈಯಲ್ಲಿ ನನ್ನ ಮೈಯನ್ನು ಮುಟ್ಟುತ್ತಿದ್ದ. ನನಗೆ ಕಿರುಕುಳ ನೀಡುವುದನ್ನು ಅರಿತು ಸೀಟಿನ ಬದಿಗೆ ಸರಿದೆ. ಆದರೆ, ಆತ ಅನಂತರವೂ ನನ್ನ ಮೈಯನ್ನು ಮುಟ್ಟುವುದನ್ನು ಮುಂದುವರಿಸಿದ. ಆ ಬಳಿಕ ಆತನನ್ನು ಗಟ್ಟಿ ಸ್ವರದಲ್ಲಿ ಗದರಿದ್ದು, ನಂತರ ಅಲ್ಲಿಂದ ಎದ್ದು ಬಸ್ಸಿನ ಹಿಂದಕ್ಕೆ ಹೋಗಿದ್ದ. ಆದರೆ, ಸ್ವಲ್ಪ ಹೊತ್ತಿನಲ್ಲಿ ಎರಡು ಮೂರು ಸ್ಟಾಪ್ ಕಳೆದು ನೋಡಿದಾಗ, ಆತ ಇನ್ನೊಂದು ಬಸ್ಸಿನಿಂದ ಇಳಿದು ಮತ್ತೆ ಅದೇ ಮಹೇಶ್ ಬಸ್ಸಿಗೆ ಬರುವುದನ್ನು ಕಂಡೆ. ಮತ್ತೆ ಬಂದು ನಾನು ಕುಳಿತಿದ್ದ ಸೀಟಿನ ಹಿಂಭಾಗದಲ್ಲಿ ಕುಳಿತಿದ್ದಲ್ಲದೆ, ಅದೇ ಚಾಳಿಯನ್ನು ಮುಂದುವರಿಸಿದ” ಎಂದು ಹುಡುಗಿ ತನ್ನ ಪೋಸ್ಟ್ ನಲ್ಲಿ ಬರೆದಿದ್ದಾರೆ.

“ನಾನು ಮತ್ತೆ ಆತನಿಗೆ ಬೈದಿದ್ದಲ್ಲದೆ, ಬೇರೆ ಪುರುಷರ ಸೀಟಿಗೆ ಹೋಗಿ ಕುಳಿತುಕೊಳ್ಳಬಹುದಲ್ಲವೇ? ಎಂದು ಕೇಳಿದೆ. ಆದರೆ, ನನ್ನ ಮಾತನ್ನು ಆತ ಕೇರ್ ಮಾಡಲಿಲ್ಲ. ನಾನು ಎಲ್ಲಾ ಪಬ್ಲಿಕ್ ಮುಂದೆ ಬೈದರೂ ಆತ ಏನೂ ಆಗಿಲ್ಲವೆಂಬಂತೆ ನನ್ನನ್ನು ಮುಟ್ಟುವ ಚಾಳಿಯನ್ನು ಮುಂದುವರಿಸಿದ್ದ. ವಿಶೇಷ ಅಂದರೆ, ಇದೆಲ್ಲವರನ್ನೂ ಇತರ ಪ್ರಯಾಣಿಕರೆಲ್ಲರೂ ನೋಡಿದ್ದು ಬಿಟ್ಟರೆ ಏನೂ ಪ್ರತಿಕ್ರಿಯಿಸಲಿಲ್ಲ. (ಛೀ… ನಾನು ಅವರನ್ನು ಪ್ಯಾಸೆಂಜರ್ ಅನ್ನಲ್ಲ, ಪ್ರೇಕ್ಷಕರು ಅಂತೇನೆ) ಬಸ್ಸಿನ ಡ್ರೈವರ್, ಕಂಡಕ್ಟರ್ ಕೂಡ ನನ್ನ ಸಹಾಯಕ್ಕೆ ಬರಲಿಲ್ಲ. ನಾನು ಮತ್ತೆ ಆತನನ್ನು ಬೈದಿದ್ದಲ್ಲದೆ, ನಿನ್ನ ಫೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತೇನೆ, ಮುಂದೆ ಯಾವತ್ತೂ ಜೀವಮಾನದಲ್ಲಿ ಇಂಥ ಕೆಲಸ ಮಾಡಬಾರದು, ಹಾಗೆ ಮಾಡ್ತೀನಿ ಎಂದು ಹೇಳಿದೆ. ಅದಕ್ಕಾತ, ತನ್ನ ಮುಖದಲ್ಲಿದ್ದ ಮಾಸ್ಕ್ ತೆಗೆದು ಫೋಟೊಗೆ ಪೋಸ್ ನೀಡಿದ್ದಲ್ಲದೆ, ಫೋಟೊ ತೆಗೆದಿದ್ದಕ್ಕೆ ಥ್ಯಾಂಕ್ಸ್ ಎಂದು ಬಿಟ್ಟ…” ಎಂದು ಯುವತಿ ತಿಳಿಸಿದ್ದಾರೆ.

ಹುಡುಗಿಯರು ಎಚ್ಚೆತ್ತುಕೊಳ್ಳಬೇಕು ಎಂಬ ನೆಲೆಯಲ್ಲಿ ಈ ಪೋಸ್ಡ್ ಮಾಡುತ್ತಿದ್ದೇನೆ. ಯಾಕೆಂದರೆ, ಬಸ್ಸಿನಲ್ಲಿ ಹೋಗುವ ಯುವತಿಯರು, ಕಾಲೇಜು ಹುಡುಗಿಯರಿಗೆ ಇಂತಹ ಕಿರುಕುಳ ಸಾಮಾನ್ಯ ಅನ್ನುವಂತಾಗಿದೆ. ಇದೇನು ಮೊದಲ ಬಾರಿಗೆ ಆಗ್ತಿರೋದು ಅಲ್ಲ. ಹಲವು ಬಾರಿ ಆಗಿರುವುದನ್ನು ಕೇಳಿದ್ದೇನೆ. ಆದರೆ, ಶೇ.99 ಮಂದಿ ಇದರ ಬಗ್ಗೆ ಹೇಳಿಕೊಳ್ಳುವುದಿಲ್ಲ. ಗೌರವ, ಸಮಾಜಕ್ಕೆ ಅಂಜಿ ಯಾರಲ್ಲೂ ಹೇಳಿಕೊಳ್ಳಲು ಮುಂದೆ ಬರುವುದಿಲ್ಲ. ಯಾವ ಕಾನೂನು, ಯಾವುದೇ ಪೊಲೀಸ್ ಆಗಲೀ, ಯಾವನೇ ಮನುಷ್ಯ ಕೂಡ ನಮ್ಮ ಸಹಾಯಕ್ಕೆ ಬರುವುದಿಲ್ಲ. ಎಲ್ಲರೂ ಏನೋ ರಿಯಾಲಿಟಿ ಶೋ ಎನ್ನುವ ರೀತಿ ನೋಡುತ್ತಾರೆ” ಎಂದು ಯುವತಿ ಬೇಸರ ವ್ಯಕ್ತಪಡಿಸಿದ್ದಾರೆ.

“ನನ್ನ ಕಳಕಳಿಯ ವಿನಂತಿ ಏನಂದರೆ, ಈ ಪೋಸ್ಟ್ ಓದುವ ಸಹೋದರ, ಸಹೋದರಿಯರೆಲ್ಲ ಇದನ್ನು ಸಾಧ್ಯವಾದಷ್ಟು ಶೇರ್ ಮಾಡಿ, ಹೀಗೆ ಮಾಡುವುದರಿಂದ ಇಂಥ ಕುಕೃತ್ಯ ಮರುಕಳಿಸುವುದನ್ನು ತಪ್ಪಿಸಬಹುದು. ಇನ್ನೂ ಮೌನವಾಗಿದ್ದರೆ, ಇಂಥ ವ್ಯಕ್ತಿಗಳು ನಾಳೆ ಬೇರೊಬ್ಬ ಯುವತಿಗೆ ಇಂಥದ್ದೇ ಕಿರುಕುಳ ನೀಡುವುದನ್ನು ಮುಂದುವರಿಸುತ್ತಾರೆ” ಎಂದು ಯುವತಿ ಎಚ್ಚರಿಸಿದ್ದಾರೆ. ಹೀಗೆ ಸುದೀರ್ಘ ಪೋಸ್ಟ್ ಒಂದನ್ನು ಬರೆಯುವ ಮೂಲಕ ಸಮಾಜದಲ್ಲಿರುವ ಇಂತಹ ದುಷ್ಕರ್ಮಿಗಳ ಬಗ್ಗೆ ಬೆಳಕು ಚೆಲ್ಲಿ, ಜಾಗೃತಿಯನ್ನು ಮೂಡಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಸಾರ್ವಜನಿಕರಿಂದ ಕೇಳಿಬರುತ್ತಿದೆ.

 

Join Whatsapp