ಕೊಲಂಬೊ: ಶ್ರೀಲಂಕಾದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು, ಕೆಲವು ನಗರಗಳಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿದೆ. ಸರಕರವು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎನ್ನುತ್ತಾ ಜನರು ಬೀದಿಗಿಳಿದಿದ್ದಾರೆ. ಇದೀಗ ಭಾನುವಾರ ಮಧ್ಯರಾತ್ರಿಯಿಂದ ಸಾಮಾಜಿಕ ಜಾಲತಾಣಕ್ಕೆ ಶ್ರೀಲಂಕಾ ಸರ್ಕಾರ ರಾಷ್ಟ್ರವ್ಯಾಪಿ ನಿರ್ಬಂಧ ಹೇರಿದೆ.
ಫೇಸ್ಬುಕ್, ಟ್ವಿಟ್ಟರ್, ವಾಟ್ಸಾಪ್, ಯೂಟ್ಯೂಬ್, ಸ್ನ್ಯಾಪ್ ಚಾಟ್, ಟಿಕ್ಟಾಕ್ ಮತ್ತು ಇನ್ಸ್ಟಾಗ್ರಾಂ ಸೇರಿದಂತೆ 25ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮಗಳ ಬಳಕೆಗೆ ಬ್ರೇಕ್ ಹಾಕಲಾಗಿದೆ. ಲಂಕಾ ಸರ್ಕಾರ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸುವಂತೆ ಶನಿವಾರ ಆದೇಶಿಸತ್ತು. ಸುಳ್ಳು ಮಾಹಿತಿಗಳು ಹರಡದಂತೆ ತಡೆಯುವುದು ಮತ್ತು ಗಲಭೆಗೆ ಪ್ರಚೋದನೆ ನೀಡುವ ಮೂಲಗಳನ್ನು ತಡೆಯುವುದು ಇದರ ಉದ್ದೇಶದ ನೆಪವೊಡ್ಡಿ ಆದೇಶ ಪ್ರಕಟಿಸಿತ್ತು.
ಈಗಾಗಲೇ ಶ್ರೀಲಂಕಾದಲ್ಲಿ 36 ಗಂಟೆಗಳ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಸೋಮವಾರ ಬೆಳಿಗ್ಗೆ 6 ಗಂಟೆಗೆ ಕರ್ಫ್ಯೂ ತೆರವಾಗಲಿದೆ. ಇಂಧನ, ಆಹಾರ ಮತ್ತು ಔಷಧಗಳ ಕೊರತೆ ಮತ್ತಷ್ಟು ತೀವ್ರಗೊಂಡಿರುವುದರಿಂದ ಜನರ ಪ್ರತಿಭಟನೆಗಳನ್ನು ತಡೆಯಲು ಲಂಕಾದಲ್ಲಿ ಕರ್ಫ್ಯೂ ಹೇರಲಾಗಿದೆ.