ಒಮಾನ್: ಸೋಶಿಯಲ್ ಫೋರಮ್ ನಿಂದ ಕವನ – ಭಾಷಣ ಸ್ಪರ್ಧೆ, ರಕ್ತದಾನ ಶಿಬಿರ

Prasthutha|

ಮಸ್ಕತ್: ಸೋಶಿಯಲ್ ಫೋರಮ್ ಒಮಾನ್ ವತಿಯಿಂದ 75ನೆ ಸ್ವಾತಂತ್ರ್ಯೋತ್ಸವವನ್ನು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳಿಗೆ ಭಾಷಣ ಸ್ಪರ್ಧೆ, ಕನ್ನಡಿಗರಿಗೆ ರಾಜ್ಯಮಟ್ಟದ ಕವನ ಸ್ಪರ್ಧೆ ಹಾಗೂ ಒಮಾನ್ ನ ಮಬೇಲ ಮತ್ತು ರುವಿ ನಗರಗಳಲ್ಲಿ ಉಚಿತ ಕೋವಿಡ್ ಲಸಿಕೆ ಶಿಬಿರ, ಸಲಾಲದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು. ಅದೇ ರೀತಿ ವಿವಿಧ ಭಾಷೆಗಳಲ್ಲಿ ವೆಬಿನಾರ್ ಮೂಲಕ ಸ್ವಾತಂತ್ರ್ಯ ಸಂದೇಶವನ್ನು ನೀಡಲಾಯಿತು.

- Advertisement -


ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆಸಿದ ರಾಜ್ಯಮಟ್ಟದ ಸ್ವರಚಿತ ಕವನ ಸ್ಪರ್ಧೆಯಲ್ಲಿ ದೇಶ ಮತ್ತು ವಿದೇಶಗಳಲ್ಲಿರುವ ನೂರಕ್ಕೂ ಅಧಿಕ ಕನ್ನಡಿಗರು ಭಾಗವಹಿಸಿದ್ದರು. ಪ್ರಥಮ ಪ್ರಶಸ್ತಿಯನ್ನು ಮುನವ್ವರ್ ಜೋಗಿಬೆಟ್ಟು, ದ್ವಿತೀಯ ಪ್ರಶಸ್ತಿಯನ್ನು ಡಾ. ಸುರೇಶ್ ನೆಳಗುಳಿ ಹಾಗೂ ತೃತೀಯ ಪ್ರಶಸ್ತಿಯನ್ನು ಶಮೀಮಾ ಕುತ್ತಾರ್ ಪಡೆದುಕೊಂಡರು. ಹಿಂದಿ, ಇಂಗ್ಲಿಷ್, ಉರ್ದು ಭಾಷೆಗಳಲ್ಲಿ ಆಯೋಜಿಸಲಾದ ಶಾಲಾ ಮಕ್ಕಳ ಆನ್ ಲೈನ್ ಭಾಷಣ ಸ್ಪರ್ಧೆಯ ಸಬ್ ಜೂನಿಯರ್ ವಿಭಾಗದಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಬಹುಮಾನಗಳನ್ನು ಪಾರಿಝಾ ಯೂನುಸ್, ರುಶ್ದಾ ಫಾತಿಮಾ ಪಡೆದುಕೊಂಡರು. ಅದೇ ರೀತಿ ಜೂನಿಯರ್ ವಿಭಾಗದಲ್ಲಿ ಅಬ್ದುರ್ರಹ್ಮಾನ್ ಮತ್ತು ನುಸ್ರಾ ಫಾತಿಮಾ ವಿಜೇತರಾದರು.


ಸ್ವಾತಂತ್ಯೋತ್ಸವದ ಪ್ರಯುಕ್ತ ಆಗಸ್ಟ್ 20ರಂದು ಒಮಾನ್ ನ ಮಬೇಲ ನಗರದ ಅಲ್ ಸಲಾಮ ಆಸ್ಪತ್ರೆಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಅನಿವಾಸಿಗರಿಗಾಗಿ ಉಚಿತ ಕೋವಿಡ್ ಲಸಿಕೆ ಶಿಬಿರವನ್ನು ಆಯೋಜಿಸಲಾಯಿತು. ಶಿಬಿರವನ್ನು ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಸಿದ್ದೀಖ್ ಅವರು ಉದ್ಘಾಟಿಸಿದರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸೋಶಿಯಲ್ ಫೋರಮ್ ಮುಖಂಡ ಮುಹಮ್ಮದ್ ಹನೀಫ್, “ಸಮಾಜಸೇವೆಯು ಮನುಷ್ಯನ ಅಭಿರುಚಿ ಮತ್ತು ಹವ್ಯಾಸವಾಗಿ ರೂಢಿಯಾಗಬೇಕು. ಅದರಲ್ಲೂ ವಿದೇಶದ ನೆಲದಲ್ಲಿ ದುಡಿಯುತ್ತಿರುವ ನಾವು ನಮ್ಮ ನಡುವೆ ಇರುವ ಅನಿವಾಸಿಗರ ಸಂಕಷ್ಟಗಳಿಗೆ ಸ್ಪಂದಿಸಲೇಬೇಕಾಗಿದೆ. ಗಲ್ಫ್ ಜೀವನದಲ್ಲಿ ಸಂಪತ್ತು ಸಂಪಾದನೆ ಮಾತ್ರ ಗುರಿಯಾಗಿರದೆ ಜನರ ಪ್ರೀತಿ ಸಂಪಾದನೆಯೂ ಗುರಿಯಾಗಿಸಿ ಜೀವಿಸಬೇಕು ಎಂದು ಕರೆ ನೀಡಿದರು. ಸೋಶಿಯಲ್ ಫೋರಮ್ ನ ಮುಹಮ್ಮದ್ ಸಲೀಮ್ ಶಿಬಿರದ ಧ್ಯೇಯೋದ್ದೇಶಗಳನ್ನು ವಿವರಿಸಿದರು.

ಅದೇ ರೀತಿ ಸಲಾಲದಲ್ಲಿ ನಡೆದ ರಕ್ತದಾನ ಶಿಬಿರವನ್ನು ಸೋಶಿಯಲ್ ಫೋರಮ್ ನ ಮುಹಮ್ಮದ್ ಫಾರೂಕ್ ಕನ್ನಂಗಾರ್ ಉದ್ಘಾಟಿಸಿದರು. ಸಲಾಲದ ಲೈಫ್ ಲೈನ್ ಆಸ್ಪತ್ರೆಯ ಸಹಯೋಗದೊಂದಿಗೆ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ 75ರಷ್ಟು ಅನಿವಾಸಿ ಭಾರತೀಯರು ರಕ್ತದಾನ ಮಾಡಿದರು.


ಇದೇ ವೇಳೆ ಮಸ್ಕತ್ ನ ರುವಿ ನಗರದಲ್ಲಿಯೂ ಎರಡನೆ ಹಂತದ ಉಚಿತ ಕೋವಿಡ್ ಲಸಿಕಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಸೋಶಿಯಲ್ ಫೋರಮ್ ಒಮಾನ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಒಮಾನ್ ನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಮಾಜಸೇವೆ ಚಟುವಟಿಕೆಗಳ ಮೂಲಕ ಆಚರಿಸಿದ್ದು ಈ ಬಾರಿಯ ವಿಶೇಷತೆಯಾಗಿತ್ತು.

Join Whatsapp