ಮಂಗಳೂರು: ಎಂಸಿಸಿ ಬ್ಯಾಂಕ್ ಅಧ್ಯಕ್ಷ, ನಿರ್ದೇಶಕರ ಅನರ್ಹತೆಗೆ ಪಟ್ಟು | ಕಾನೂನು ಮೊರೆಗೆ ಮುಂದಾದ ಸದಸ್ಯರು!

Prasthutha|

ಮಂಗಳೂರು: ಶತಮಾನದ ಇತಿಹಾಸ ಹೊಂದಿರುವ ಮಂಗಳೂರು ಕ್ಯಾಥೋಲಿಕ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಅಧ್ಯಕ್ಷ ಅನಿಲ್ ಕುಮಾರ್ ಲೋಬೋ ಹಾಗೂ ನಿರ್ದೇಶಕ ಜೋಸೆಫ್ ಎಂ. ಅನಿಲ್ ಪತ್ರಾವೋ ಅಧಿಕಾರವನ್ನು ಸಂಪೂರ್ಣ ದುರ್ಬಳಕೆ ಮಾಡಿಕೊಂಡಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದಾಗಿ ಸಾಮಾಜಿಕ ಕಾರ್ಯಕರ್ತ ಜೆರಾರ್ಡ್ ಟವರ್ಸ್ ಆರೋಪಿಸಿದ್ದಾರೆ. ಹೀಗಾಗಿ ತಕ್ಷಣವೇ ಈ ಇಬ್ಬರನ್ನು ಅಧಿಕಾರದಿಂದ ಅನರ್ಹತೆಗೊಳಿಸುವಂತೆ ಹಾಗೂ ಇದೆಲ್ಲಕ್ಕೂ ಬೆಂಬಲವಾಗಿ ನಿಂತ ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್ ಅವರನ್ನು ತಕ್ಷಣದಿಂದ ವಜಾಗೊಳಿಸುವಂತೆಯೂ ಒತ್ತಾಯಿಸಿದ್ದಾರೆ.

- Advertisement -

ನಗರದ ಖಾಸಗಿ ಹೊಟೇಲ್ ವೊಂದರಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಎಂಸಿಸಿ ಬ್ಯಾಂಕ್ ನ ಸದಸ್ಯರೂ ಆದ ಜೆರಾರ್ಡ್ ಟವರ್ಸ್, ಸಹಕಾರ ಸಂಘಗಳ ರಿಜಿಸ್ಟ್ರಾರ್ ತಕ್ಷಣವೇ ಇವರ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಎಂಸಿಸಿ ಬ್ಯಾಂಕ್ ನ ಪ್ರಸ್ತುತ ಅಧ್ಯಕ್ಷ ಅನಿಲ್ ಲೋಬೋ ತಮ್ಮ ಸ್ನೇಹಿತರಿಗೆ ಕೋಟ್ಯಂತರ ರೂಪಾಯಿ ಸಾಲ ನೀಡಿದ ಮರುಕ್ಷಣದಲ್ಲೇ ಅದರಲ್ಲಿ ನಿಗದಿತ ಮೊತ್ತ ಅನಿಲ್ ಲೋಬೋ ಹಾಗೂ ಅವರ ಪತ್ನಿ ಹೆಸರಿಗೆ ಜಮಾವಣೆ ಆಗಿದೆ. ಅಲ್ಲದೇ ಬ್ಯಾಂಕ್ ನಲ್ಲಿ ನೇಮಿಸಲಾದ ಐಟಿ ವಿಭಾಗದ ಸಿಬ್ಬಂದಿಗಳು ಅನಿಲ್ ಲೋಬೋ ಅವರ ನಿಕಟ ಸಂಬಂಧಿಗಳಾಗಿದ್ದಾರೆ ಎಂದು ಜೆರಾರ್ಡ್ ಅಂಕಿ ಅಂಶ ಸಮೇತ ಆರೋಪಿಸಿದ್ದಾರೆ. ಈ ಬಗ್ಗೆ ಆರ್.ಬಿ.ಐ ಗಮನಕ್ಕೂ ಬಂದಿದ್ದು ರಿಸರ್ವ್ ಬ್ಯಾಂಕಿನ ಮೇಲ್ವಿಚಾರಣ ಇಲಾಖೆಯು ತನಿಖೆಗಾಗಿ ರಿಜಿಸ್ಟ್ರಾರ್ ಅವರಿಗೆ ಸೂಚಿಸಿದ್ದರೂ ತನಿಖೆ ನಡೆದಿಲ್ಲ. ಇನ್ನೊಂದೆಡೆ ನಿರ್ದೇಶಕ ಜೋಸೆಫ್ ಎಂ. ಅನಿಲ್ ಪತ್ರಾವೋ ಕೂಡಾ ಸ್ನೇಹಿತರೋರ್ವರಿಗೆ ಸೂಕ್ತ ದಾಖಲೆಗಳಿಲ್ಲದೇ ಕೋಟ್ಯಂತರ ರೂಪಾಯಿ ಸಾಲ ನೀಡಿದ್ದಾರೆ. ಈ ಮೂಲಕ ಇವರಿಬ್ಬರು ಆರ್.ಬಿ.ಐ ಹಾಗೂ ಆರ್.ಸಿ,ಎಸ್. ನಿಯಮಗಳನ್ನು ಉಲ್ಲಂಘಿಸಿದ್ದಾಗಿ ತಿಳಿಸಿದ್ದಾರೆ.

- Advertisement -

ಈ ಅವ್ಯವಹಾರದ ಕುರಿತು ಸಂಸದ ನಳಿನ್ ಕುಮಾರ್ ಕಟೀಲ್, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಶಾಸಕರಾದ ವೇದವ್ಯಾಸ ಕಾಮತ್, ಯುಟಿ ಖಾದರ್ ಅವರಿಗೂ ಪತ್ರ ಬರೆಯಲಾಗಿದ್ದು, ಆದರೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ ಎಂದು ಟವರ್ಸ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಸ್ಟೀವನ್ ಡಿಸೋಜಾ, ಯೂಜಿನ್ ಲೋಬೋ ಉಪಸ್ಥಿತರಿದ್ದರು.  



Join Whatsapp