ಬೆಂಗಳೂರು: ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಹುಕ್ಕಾ ಬಾರ್‌ಗಳನ್ನು ನಿಷೇಧಿಸಲು ಮತ್ತು ತಂಬಾಕು ಉತ್ಪನ್ನಗಳನ್ನು ಖರೀದಿಸುವ ಮತ್ತು ಧೂಮಪಾನದ ಕಾನೂನುಬದ್ಧ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಿಸಲು ಯೋಜಿಸಿದೆ. ತಂಬಾಕು ಕಾಯ್ದೆಗೆ ತಿದ್ದುಪಡಿ ತಂದು ಬದಲಾವಣೆ ತರಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಹಾಗೂ ಕ್ರೀಡಾ ಮತ್ತು ಯುವಜನ ಇಲಾಖೆಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯದ ಮುಂಬರುವ ಪೀಳಿಗೆಯನ್ನು ರಕ್ಷಿಸಲು ಹುಕ್ಕಾ ಬಾರ್‌ಗಳನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. 12 ರಿಂದ 25 ವರ್ಷ ವಯಸ್ಸಿನ ಜನರು ಹುಕ್ಕಾ ಬಾರ್‌ಗಳಿಗೆ ಭೇಟಿ ನೀಡುವುದನ್ನು ನಾವು ನೋಡುತ್ತಿದ್ದೇವೆ. ಅವರು ಹುಕ್ಕಾದಲ್ಲಿ ಯಾವ ಪದಾರ್ಥಗಳನ್ನು ಬಳಸುತ್ತಾರೆ ಎಂಬುದು ನಮಗೆ ಖಚಿತವಿಲ್ಲ. ಆದರೆ ಜನರು ಅದಕ್ಕೆ ವ್ಯಸನಿಯಾಗಿದ್ದಾರೆ ಎಂದು ಹೇಳಿದರು.
ವೈದ್ಯರ ವರದಿ ಪ್ರಕಾರ, 35 ರಿಂದ 40 ನಿಮಿಷಗಳ ಕಾಲ ಹುಕ್ಕಾ ಸೇದುವುದು 100 ರಿಂದ 150 ಸಿಗರೇಟ್ ಸೇದುವುದಕ್ಕೆ ಸಮ ಎಂದು ಕ್ರೀಡಾ ಮತ್ತು ಯುವಜನ ಇಲಾಖೆ ಸಚಿವ ಬಿ ನಾಗೇಂದ್ರ ಹೇಳಿದ್ದಾರೆ.
ತಂಬಾಕು ಉತ್ಪನ್ನಗಳನ್ನು ಖರೀದಿಸಲು ಮತ್ತು ಬಳಸಲು ಕಾನೂನುಬದ್ಧ ವಯಸ್ಸನ್ನು 21 ವರ್ಷಕ್ಕೆ ಹೆಚ್ಚಿಸಲು ತಂಬಾಕು ಕಾಯಿದೆಗೆ ಕಾನೂನು ತಿದ್ದುಪಡಿಗಳನ್ನು ಮಾಡಲಾಗುವುದು ಎಂದು ಆರೋಗ್ಯ ಸಚಿವರು ಹೇಳಿದರು. ನಿಷೇಧದ ನಿರ್ಧಾರವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ ಪೊಲೀಸರು ತೊಡಗಿಸಿಕೊಳ್ಳುತ್ತಾರೆ ಎಂದು ಸಚಿವರು ಹೇಳಿದರು.