ನವದೆಹಲಿ: ಒಕ್ಕೂಟ ಸರ್ಕಾರ ಜಾರಿಗೆ ತಂದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸಿದ ಪ್ರತಿಭಟನೆ ವೇಳೆ ಸಾವನ್ನಪ್ಪಿದ 702 ರೈತರ ಪಟ್ಟಿಯನ್ನು ಸಂಯುಕ್ತ ಕಿಸಾನ್ ಮೋರ್ಚಾ (ಎಸ್.ಕೆ.ಎಂ) ಶನಿವಾರ ಸರ್ಕಾರಕ್ಕೆ ಕಳುಹಿಸಿದೆ.
ರೈತ ಮುಖಂಡ ಕಿಶನ್ ಪಾಲ್ ಈ ಬಗ್ಗೆ ಮಾಧ್ಯಮಕ್ಕೆ ವಿವರ ನೀಡಿ, ಆಂದೋಲನದ ಸಂದರ್ಭದಲ್ಲಿ ಹುತಾತ್ಮರಾದ 702 ರೈತರ ಪಟ್ಟಿಯನ್ನು ನಾವು ಸರ್ಕಾರಕ್ಕೆ ಕಳುಹಿಸಿದ್ದೇವೆ ಎಂದು ತಿಳಿಸಿದರು.
ಇತ್ತೀಚೆಗೆ ಲೋಕಸಭೆಯಲ್ಲಿ ಕೇಂದ್ರ ಸರ್ಕಾರದ ಬಳಿ ರೈತರ ಆಂದೋಲನದ ವೇಳೆ ಸಾವನ್ನಪ್ಪಿದ ಬಗ್ಗೆ ಮಾಹಿತಿ ಇದೆಯೇ ಮತ್ತು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಸರ್ಕಾರ, ಆಂದೋಲನದಿಂದ ಯಾವುದೇ ರೈತರು ಜೀವ ಕಳೆದುಕೊಂಡ ಬಗ್ಗೆ ಕೃಷಿ ಸಚಿವಾಲಯದ ಬಳಿ ಯಾವುದೇ ದಾಖಲೆಗಳಿಲ್ಲ. ಆದ್ದರಿಂದ ಪರಿಹಾರ ಪರಿಹಾರ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿತ್ತು.
ಮಾತ್ರವಲ್ಲ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದ ನಂತರ ಮುಂದಿನ ಕ್ರಮಗಳ ಕುರಿತು ಚರ್ಚಿಸಲು ರೈತರು ಸಿಂಘು ಗಡಿಯಲ್ಲಿ ಮಹತ್ವದ ಸಭೆ ನಡೆಸುತ್ತಿದ್ದಾರೆ. ರೈತರ ವಿರುದ್ಧ ದಾಖಲಾದ ಪ್ರಕರಣಗಳನ್ನು ಹಿಂಪಡೆಯುವುದು, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರೂಪಿಸುವುದು, ಮೃತರ ಕುಟುಂಬಗಳಿಗೆ ಪರಿಹಾರ ಸೇರಿದಂತೆ ಇನ್ನಿತರ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಚರ್ಚೆ ನಡೆಸುತ್ತಿದ್ದಾರೆ.