ವಾಷಿಂಗ್ಟನ್: ಪೂರ್ವ ಯುಎಸ್’ಎಯ ವರ್ಜೀನಿಯಾ ಪ್ರಾಂತ್ಯದ ಪ್ರಾಥಮಿಕ ಶಾಲೆಯೊಂದರ ಆರು ವರ್ಷದ ಬಾಲಕನೊಬ್ಬ ಟೀಚರಿಗೆ ಗುಂಡು ಹಾರಿಸಿ ತೀವ್ರವಾಗಿ ಗಾಯಗೊಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಿಚ್ನೆಕ್ ಎಲಿಮೆಂಟರಿ ಶಾಲೆಯಲ್ಲಿ ನಡೆದ ಈ ಗುಂಡಿನ ದಾಳಿಯಲ್ಲಿ ಶಿಕ್ಷಕಿ ತೀವ್ರವಾಗಿ ಗಾಯಗೊಂಡಿದ್ದಾರೆ. ಉಳಿದಂತೆ ಯಾವ ವಿದ್ಯಾರ್ಥಿ ಕೂಡ ಗಾಯಗೊಂಡಿಲ್ಲ.
“ಗುಂಡು ಹಾರಿಸಿದ್ದು ಆರು ವರ್ಷದ ಒಬ್ಬ ವಿದ್ಯಾರ್ಥಿ. ಆತ ಈಗ ಪೊಲೀಸರ ವಶದಲ್ಲಿ ಇದ್ದಾನೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥ ಸ್ಟೀವ್ ಡ್ರಿವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
“ಇದು ಆಕಸ್ಮಿಕ ಗುಂಡು ಹಾರಾಟವಲ್ಲ” ಎಂದೂ ಅವರು ತಿಳಿಸಿದರು.
ಗಾಯಗೊಂಡ ಶಿಕ್ಷಕಿಯು 30ರ ಪ್ರಾಯದವರಾಗಿದ್ದು, ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಗರ ಶಾಲೆಗಳ ಸೂಪರಿನ್ ಟೆಂಡೆಂಟ್ ಜಾರ್ಜ್ ಪಾರ್ಕರ್ ಅವರು ಈ ಘಟನೆಯಿಂದ ನನ್ನ ಹೃದಯ ಒಡೆದಂತಾಗಿದ್ದು, ಆಘಾತಕ್ಕೀಡಾಗಿರುವುದಾಗಿ ಹೇಳಿದರು.
“ಮಕ್ಕಳು ಮತ್ತು ಯುವ ಜನಾಂಗದ ಕೈಗೆ ಗನ್’ಗಳು ದೊರೆಯದಂತೆ ಮಾಡಲು ಇಡೀ ಸಮುದಾಯವೇ ಒಗ್ಗೂಡಿ ದುಡಿಯಬೇಕಾಗಿದೆ” ಎಂದೂ ಅವರು ಹೇಳಿದರು.
ಶಾಲೆಗಳಲ್ಲಿ ಗುಂಡು ಹಾರಿಸುವುದು ಯುಎಸ್’ಎಯಲ್ಲಿನ ಹೊಸ ಪಿಡುಗಾಗಿದೆ. ಕಳೆದ ಮೇ ತಿಂಗಳಲ್ಲಿ ಟೆಕ್ಸಾಸಿನ ಉವಾಲ್ಡೆಯಲ್ಲಿ 18ರ ಯುವಕನೊಬ್ಬ ಮನ ಬಂದಂತೆ ಗುಂಡು ಹಾರಿಸಿ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕಿಯರನ್ನು ಕೊಂದ ಘಟನೆ ನಡೆದಿತ್ತು.
ಕಳೆದ ವರ್ಷ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 44,000 ಗನ್ ಸಂಬಂಧಿ ಸಾವುಗಳು ಆಗಿವೆ. ಅದರಲ್ಲಿ ಅರ್ಧಕ್ಕರ್ಧ ಕೊಲೆಗಳು. ಉಳಿದವು ಆಕಸ್ಮಿಕ, ಸ್ವರಕ್ಷಣೆಗಾಗಿ, ಆತ್ಮಹತ್ಯೆ ಎಂದು ನಡೆದಿವೆ ಎಂದು ಗನ್ ವೊಯಲೆನ್ಸ ಆರ್ಚಿವ್ ಡೆಟಾಬೇಸ್ ವರದಿ ಮಾಡಿದೆ.