ಪಾಲಕ್ಕಾಡ್ ಪ್ರಕ್ಷುಬ್ಧ | 50 ಮಂದಿ ವಶಕ್ಕೆ, ದ್ವಿಚಕ್ರ ವಾಹನಗಳಲ್ಲಿ ಇಬ್ಬರು ಪ್ರಯಾಣಿಸುವಂತಿಲ್ಲ

Prasthutha|

ಪಾಲಕ್ಕಾಡ್: 24 ಗಂಟೆಗಳಲ್ಲಿ ಎರಡು ರಾಜಕೀಯ ಹತ್ಯೆಗಳು ನಡೆದಿರುವ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ, ಬುಧವಾರ ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಮುಂದುವರಿಸಲಾಗಿದ್ದು, ದ್ವಿಚಕ್ರ ವಾಹನಗಳಲ್ಲಿ ಇಬ್ಬರು ಪ್ರಯಾಣಿಸುವುದಕ್ಕೆ ನಿರ್ಬಂಧ ಹೇರಲಾಗಿದೆ. ಈ ಕುರಿತು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಕೆ. ಮಣಿಕಂಠನ್ ಆದೇಶ ಹೊರಡಿಸಿದ್ದು,‌ ಪಾಲಕ್ಕಾಡ್‌ ಜಿಲ್ಲಾಧಿಕಾರಿ ಮೃನ್ಮಯಿ ಜೋಶಿ ಸಾಮಾಜಿಕ ಜಾಲತಾಣಗಳಲ್ಲಿ ಆದೇಶದ ಪ್ರತಿಯನ್ನು ಹಂಚಿಕೊಂಡಿದ್ದಾರೆ.  ಮಹಿಳೆಯರಿಗೆ ಮತ್ತು ಮಕ್ಕಳಿಗೆ ಈ ಆದೇಶದಲ್ಲಿ ವಿನಾಯತಿ ನೀಡಲಾಗಿದೆ.

- Advertisement -

ಎಎಸ್‌ಟಿ ರಚನೆ, 50ಕ್ಕೂ ಹೆಚ್ಚು ಮಂದಿ ವಶಕ್ಕೆ

ಸುಬೈರ್ ಮತ್ತು ಶ್ರೀನಿವಾಸನ್ ಹತ್ಯೆಯ ತನಿಖೆಗೆ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಎಸ್‌ಡಿಪಿಐ ಮತ್ತು ಆರ್‌ಎಸ್‌ಎಸ್‌ ಸಂಘಟನೆಗಳಿಗೆ ಸೇರಿದ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು  ಕಾನೂನು ಮತ್ತು ಸುವ್ಯವಸ್ಥೆ ಮಹಾನಿರ್ದೇಶಕ (ಎಡಿಜಿಪಿ) ವಿಜಯ್ ಸಾಖರೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

- Advertisement -

ಪಾಲಕ್ಕಾಡ್‌ ಪ್ರಕ್ಷುಬ್ಧ

ಎರಡು ರಾಜಕೀಯ ಹತ್ಯೆಗಳಿಂದಾಗಿ ಪಾಲಕ್ಕಾಡ್ ಜಿಲ್ಲೆಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಶುಕ್ರವಾರ ಮಧ್ಯಾಹ್ನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ತನ್ನ ತಂದೆಯೊಂದಿಗೆ ಮನೆಗೆ ಮರಳುತ್ತಿದ್ದಾಗ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತನಾಗಿದ್ದ ಸುಬೈರ್ (43) ಎಂಬುವವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಇದಾದ 24 ಗಂಟೆಯ ಒಳಗಾಗಿ ಶನಿವಾರ ಹಾಡಹಗಲೇ ನಗರದ ಹೃದಯಭಾಗದಲ್ಲಿ ಆರ್‌ಎಸ್‌ಎಸ್ ಮುಖಂಡ ಶ್ರೀನಿವಾಸನ್ (45)ನನ್ನು ಹತ್ಯೆಗೈಯಲಾಗಿತ್ತು.

ಮೇಲಮುರಿ ಎಂಬಲ್ಲಿರುವ ತನ್ನ ಅಂಗಡಿಯಲ್ಲಿದ್ದ ಶ್ರೀನಿವಾಸನ್‌ರನ್ನು, ಮೂರು ಬೈಕ್‌ಗಳಲ್ಲಿ ಬಂದ 6 ಮಂದಿಯ ತಂಡ ಹತ್ಯೆಗೈದು ಪರಾರಿಯಾಗಿತ್ತು. ದುಷ್ಕರ್ಮಿಗಳು ಅಂಗಡಿಯನ್ನು ಸುತ್ತುವರಿದು, ಅವರಲ್ಲಿ ಮೂವರು ಶ್ರೀನಿವಾಸನ್ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಮೀಪದ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಎಡಿಜಿಪಿ ವಿಜಯ್ ಸಾಖರೆ ಅವರು ಪಾಲಕ್ಕಾಡ್ ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದು, ಜಿಲ್ಲೆಯಲ್ಲಿ ಪೊಲೀಸ್ ಭದ್ರತೆ ಮತ್ತಷ್ಟು ಬಿಗಿಗೊಳಿಸಲಾಗಿದೆ.



Join Whatsapp